

ನಂಜನಗೂಡು: ತಾಲೂಕಿನ ಸಂಗಮ ಸುಕ್ಷೇತ್ರದಲ್ಲಿರುವ ಪವಾಡ ಪುರುಷ ಸದ್ಗುರು ಶ್ರೀ ಮಹದೇವ ತಾತಾ ಅವರ 32ನೇ ವರ್ಷದ ಸಂಸ್ಮರಣೋತ್ಸವ ಅಂಗವಾಗಿ ಸೋಮವಾರ ವಿಜೃಂಭಣೆಯ ರಥೋತ್ಸವ ಜರುಗಿತು.
ಪುಷ್ಯ ಶುದ್ಧ ಏಕಾದಶಿ ದಿನವಾದ ಸೋಮವಾರ ಮುಂಜಾನೆ 5:30ರ ಸಮಯದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ಸಕಲ ಪೂಜಾ ಕಾರ್ಯಗಳು ಗದ್ದಿಗೆ ಒಳ ಆವರಣದಲ್ಲಿ ಸಾಂಗವಾಗಿ ಜರುಗಿದವು. ನಂತರ ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠಾಧ್ಯಕ್ಷ ಮಹಾಂತ ಸ್ವಾಮಿ ಅವರಿಗೆ ಪಾದಪೂಜೆ ಕೈಗೊಳ್ಳಲಾಯಿತು. ರಾಮಲಿಂಗೇಶ್ವರ ಕ್ಷೇತ್ರದ ಕಾರ್ಯಸ್ವಾಮಿ ಮಠಾಧ್ಯಕ್ಷ ಶ್ರೀ ಮಹೇಶ್ವರಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು.
ವಿವಿಧ ಬಗೆಯ ಅಲಂಕೃತ ಪುಷ್ಪ ಹಾಗೂ ವರ್ಣಮಯ ಅಲಂಕಾರಿಕ ಬಟ್ಟೆಗಳಿಂದ ಸಿಂಗರಿಸಿದ್ದ ಎರಡು ಜೋಡಿ ರಥಗಳಲ್ಲಿ ಬೆಳ್ಳಿ ಹಾಗೂ ಪಂಚಲೋಹದ ಮಹದೇವ ತಾತಾ ಅವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯದ ಸುತ್ತಲಿನ ಆವರಣದಲ್ಲಿ ಜೋಡಿ ರಥಗಳು ಸಾಗಿ ಸ್ವಸ್ಥಾನಕ್ಕೆ ಮರಳಿದವು. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು. ವೀರಗಾಸೆ, ನಂದಿಧ್ವಜ ಮಂಗಳ ವಾದ್ಯಗೋಷ್ಠಿ, ಪೂಜಾ ಕುಣಿತ, ಶೃಂಗಾರ ಮೇಳ, ವೀರಭದ್ರ ಕುಣಿತ ಪ್ರದರ್ಶನ ರಥೋತ್ಸವಕ್ಕೆ ಮೆರಗು ಹೆಚ್ಚಿಸಿತು.
ಕಂಸಾಳೆ ಜಾನಪದರು ಹಾಗೂ ಭಜನೆ ತಂಡಗಳು ಮಹದೇವ ತಾತಾ ಸ್ಮರಣೆಯ ಗೀತೆಗಳನ್ನು ಪಠಿಸುತ್ತ ಹೆಜ್ಜೆ ಹಾಕಿದರು. ರಥಗಳಿಗೆ ಪೂಜೆ ಸಲ್ಲಿಸಿ ಈಡುಗಾರಿ ಹೊಡೆದು ಪವಾಡ ಪುರಷನ ಕೃಪೆಗೆ ಪಾತ್ರರಾದರು.
ಸಂಗಮ ಸುತ್ತಮುತ್ತಲಿನ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿ ರಥೋತ್ಸವದ ಕ್ಷಣಕ್ಕೆ ಸಾಕ್ಷಿಯಾದರು. ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ನಾನಾ ಜಿಲ್ಲೆಗಳಿಂದ ಭಕ್ತರು ಸಂಸ್ಮರಣೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಸಂಗಮ ಕ್ಷೇತ್ರದ ಸುತ್ತಲಿನ ಪ್ರದೇಶದಲ್ಲಿ ತಲೆ ಎತ್ತಿದ ಟೆಂಟ್ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಜೋರಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ಭಜನಾ ತಂಡಗಳಿಂದ ಹರಿ ಭಜನೆ, ಕೀರ್ತನೆಗಳ ಗಾಯನ ನಡೆಸಿಕೊಟ್ಟರು.
ಕಪಿಲೆ, ನುಗು ಹಾಗೂ ಗುಪ್ತಗಾಮಿನಿ ಸಂಗಮಗೊಳ್ಳುವ ನದಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು.ಭಕ್ತರ ಅನುಕೂಲಕ್ಕಾಗಿ ಮೈಸೂರು, ನಂಜನಗೂಡು, ಹುಲ್ಲಹಳ್ಳಿ ಹಾಗೂ ಹೊಮ್ಮರಗಳ್ಳಿ ಮಾರ್ಗವಾಗಿ ಹೆಚ್ಚುವರಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.
ಕಣ್ಮನ ಸೆಳೆದ ಅಲಂಕಾರ: ಮಹದೇವ ತಾತಾ ಗದ್ದುಗೆಯಲ್ಲಿ ಬಗೆಬಗೆಯ ಪುಷ್ಪಗಳಿಂದ ಮಾಡಲಾಗಿದ್ದ ಅಲಂಕಾರ ಕಣ್ಮನ ಸೆಳೆಯಿತು. ವೈಭವೋಪಿತ ಗದ್ದುಗೆಯನ್ನು ಕಣ್ತುಂಬಿಕೊಂಡ ಭಕ್ತರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದುಕೊಂಡರು.
ಅನ್ನಸಂತರ್ಪಣೆ: 30 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಮಹದೇವ ತಾತಾ ಭಕ್ತ ಮಂಡಳಿ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮಹದೇವ ತಾತಾ ಭಕ್ತರಾಗಿರುವ ಬಾಣಸಿಗರು, ಸ್ವಯಂ ಸೇವಕರು ದಾಸೋಹದಲ್ಲಿ ತೊಡಗಿಸಿಕೊಂಡಿದ್ದರು. ಯಾವುದೇ ಅಹಿತಕರ ಘಟನೆ ಜರುಗದಂತೆ ಸರ್ಕಲ್ ಇನ್ಸ್‌ಪೆಕ್ಟರ್ ರಾಜಶೇಖರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.