ದಸಂಸ ಕಾರ್ಯಕರ್ತರ ಪ್ರತಿಭಟನೆ

04NGD4
Published on

ನಂಜನಗೂಡು: ತಾಲೂಕಿನ ನಂದಗುಂದ ಗ್ರಾಮದ ದಲಿತ ಮಹಿಳೆಗೆ ಸೇರಿದ ಜಮೀನಿಗೆ ಸುಳ್ಳು ದಾಖಲೆ ಸೃಷ್ಟಿಸಿ ಫಸಲು ನಾಶ ಮಾಡಿ ಸವರ್ಣೀಯ ವ್ಯಕ್ತಿಯೊಬ್ಬರು ಲಪಟಾಯಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ಮಿನಿ ವಿಧಾನಸೌಧದ ಎದುರು ಸಂತ್ರಸ್ತ ದಲಿತ ಮಹಿಳೆ ವೆಂಕಟಮ್ಮ ಜತೆ ಜಮಾಯಿಸಿದ ಕಾರ್ಯಕರ್ತರು, ಸವರ್ಣೀಯ ವ್ಯಕ್ತಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಕಾರ್ಯ ಬಸವಣ್ಣ ಮಾತನಾಡಿ, ನಂದಗುಂದ ಗ್ರಾಮದ ಸರ್ವೇ ನಂ.143ರಲ್ಲಿ 5 ಎಕರೆ ಭೂಮಿಯಲ್ಲಿ 3 ಎಕರೆ ವೆಂಕಟಮ್ಮ ಹೆಸರಲ್ಲಿದೆ. ಉಳಿದ ಎರಡು ಎಕರೆಯನ್ನು ಕಳೆದ 40 ವರ್ಷಗಳಿಂದ ಅನುಭೋಗದಲ್ಲಿದ್ದಾರೆ. ಎಸ್.ಹೊಸಕೋಟೆ ಗ್ರಾಮದ ಸ್ವಾಮಿ ಎಂಬ ಸವರ್ಣೀಯ ವ್ಯಕ್ತಿಯು ಈ ಭೂಮಿಗೆ ಸರ್ವೇ ನಂ.177 ಅಂತ ಸುಳ್ಳು ದಾಖಲೆ ಸೃಷ್ಟಿಸಿ ನಮಗೆ ಸೇರಬೇಕಾಗಿದೆ ಎಂದು ಹೇಳಿ ವೆಂಕಟಮ್ಮ ಬೆಳೆದಿದ್ದ ಕಬ್ಬು ಫಸಲನ್ನು ವಾರದ ಹಿಂದೆ ರಾತ್ರೋರಾತ್ರಿ ದಾಳಿಯಿಟ್ಟು ನಾಶ ಮಾಡಿ ದೌರ್ಜನ್ಯ ಎಸಗಿದ್ದಾರೆ. ಈ ಕುರಿತು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಪಾದಿಸಿದರು.

ಸಂತ್ರಸ್ತ ಮಹಿಳೆ ವೆಂಕಟಮ್ಮ ಮಾತನಾಡಿ, ಕಳೆದ ವರ್ಷ ಕಬ್ಬು ಫಸಲು ಬೆಳೆದಿದ್ದಾಗ ಕಟಾವು ಮಾಡುವ ಸಂದರ್ಭದಲ್ಲಿ ಈ ಜಮೀನು ನಮಗೆ ಸೇರಬೇಕಾಗಿದ್ದು ಎಂದು ಸ್ವಾಮಿ ಎಂಬುವರು ತಕರಾರು ತೆಗೆದು ಫಸಲು ನಾಶ ಮಾಡಲು ಮುಂದಾಗಿದ್ದರು. ಇದೀಗ ಮತ್ತೆ ಅದೇ ರೀತಿ ಕ್ಯಾತೆ ತೆಗೆದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಕಚೇರಿಯ ಶಿರಸ್ತೇದಾರ್ ಶಿವಪ್ರಸಾದ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಬೊಕ್ಕಳ್ಳಿ ಮಹದೇವಸ್ವಾಮಿ, ರೈತ ಮುಖಂಡ ಕಂದೇಗಾಲ ಶ್ರೀನಿವಾಸ್, ಜನಸಂಗ್ರಾಮ ಪರಿಷತ್ ವಿಭಾಗೀಯ ಕಾರ್ಯದರ್ಶಿ ನಗರ್ಲೆ ಎಂ.ವಿಜಯಕುಮಾರ್, ತಾಲೂಕು ಸಂಚಾಲಕ ದೇವರಸನಹಳ್ಳಿ ಬಸವರಾಜು, ಹರದನಹಳ್ಳಿ ರಾಜೇಶ್, ಕಳಲೆ ಕುಮಾರ್, ಮಲ್ಕುಂಡಿ ಕೃಷ್ಣ, ಕಾರ್ಯ ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net