ವಿವಾದಿತ 27.15 ಎಕರೆ ಜಾಗ ಸರ್ಕಾರದ ವಶಕ್ಕೆ

21NGD13
Published on

ನಂಜನಗೂಡು: ತಾಲೂಕಿನ ದೇಬೂರು ಗ್ರಾಮದ ವಿವಾದಿತ 27.15 ಎಕರೆ ಜಾಗ ಸರ್ಕಾರಿ ಕೆರೆಗೆ ಸೇರಿದ್ದು ಎಂದು ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ರೈತಸಂಘ ಹಾಗೂ ಜನಸಂಗ್ರಾಮ ಪರಿಷತ್ ಕಾರ್ಯಕರ್ತರು ಮಂಗಳವಾರ ಜಮೀನಿನ ಬಳಿ ಜಮಾಯಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಜನಸಂಗ್ರಾಮ ಪರಿಷತ್ ವಿಭಾಗೀಯ ಕಾರ್ಯದರ್ಶಿ ನಗರ್ಲೆ ಎಂ.ವಿಜಯಕುಮಾರ್ ಮಾತನಾಡಿ, ಅಧಿಕಾರ ಹಾಗೂ ಪ್ರಭಾವ ಬಳಸಿಕೊಂಡು ಕಳೆದ 25 ವರ್ಷದಿಂದಲೂ ಪ್ರಭಾವಿಯೊಬ್ಬರು ಕೆರೆ ಜಾಗವನ್ನು ಅತಿಕ್ರಮಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ವಿವಾದಿತ ಜಮೀನಿನ ವಿರುದ್ಧ ಹೋರಾಟ ಕೈಗೊಂಡಾಗ ಜಮೀನನ್ನು ಅತಿಕ್ರಮಿಸಿಕೊಂಡಿದ್ದ ಪ್ರಭಾವಿ ವ್ಯಕ್ತಿಯು ಸುಳ್ಳು ದಾಖಲೆಗಳನ್ನು ಸಲ್ಲಿಸುವ ಮೂಲಕ ಅಧಿಕಾರಿಗಳನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದರು. ನಾವು ಬೆಂಬಿಡದೆ ಫಾಲೋಅಪ್ ಮಾಡಿದ್ದರಿಂದ ಐವರು ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದರು. ಬೆದರಿಕೆಗೆ ಜಗ್ಗದೆ ಹೋರಾಟ ಮುಂದುವರಿಸಿದ ಫಲವಾಗಿ ಅತಿಕ್ರಮಣಗೊಂಡಿದ್ದ 27.15 ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದೆ. ನಮ್ಮ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದರು.
ರೈತಸಂಘದ ಜಿಲ್ಲಾ ಕಾರ್ಯದರ್ಶಿ ಇಮ್ಮಾವು ರಘು, ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್, ಗ್ರಾಮಸ್ಥರಾದ ಚಿಕ್ಕಂಡಯ್ಯ, ಈರಣ್ಣ, ಮೋಹನ್ ಹಾಜರಿದ್ದರು.

ಏನಿದು ಪ್ರಕರಣ?: ಗ್ರಾಮದ ಸರ್ವೇ ನಂ.277ರಲ್ಲಿ 27.15 ಎಕರೆ ಜಾಗವನ್ನು ಸುಮಾರು 25 ವರ್ಷಗಳಿಂದ ಪ್ರಭಾವಿ ವ್ಯಕ್ತಿ ಅತಿಕ್ರಮಿಸಿಕೊಂಡು ಅನುಭೋಗದಲ್ಲಿದ್ದರು. ಆ ಜಮೀನಿನಲ್ಲಿ ಭತ್ತದ ಬೆಳೆ ತೆಗೆಯುತ್ತಿದ್ದರು. ಇದು ದೇಬೂರು ಸರ್ಕಾರಿ ಕೆರೆ ಜಾಗ ಎಂಬುದು ದಾಖಲೆಯಲ್ಲಿರುವುದನ್ನು ಕಂಡ ರೈತಸಂಘ ಹಾಗೂ ಜನಸಂಗ್ರಾಮ ಪರಿಷತ್ ಕಾರ್ಯಕರ್ತರು ಎರಡು ವರ್ಷಗಳ ಹಿಂದೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಿದ್ದರು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ನಡೆಸಿತ್ತು. ದಾಖಲೆಗಳನ್ನು ಪರಿಶೀಲಿಸಿದಾಗ ಸರ್ಕಾರಿ ಕೆರೆ ಪ್ರದೇಶ ಎಂಬುದು ಪತ್ತೆಯಾಗಿದೆ. 

ನಾಮಫಲಕ ಅಳವಡಿಕೆ: ಸರ್ವೇ ನಂ.277ರಲ್ಲಿ 27.15 ಎಕರೆ ಜಾಗ ಸರ್ಕಾರಿ ಕೆರೆಯಾಗಿದ್ದು, ಅತಿಕ್ರಮ ಪ್ರವೇಶವನ್ನು ನಿಷೇಧಿಸಲಾಗಿದೆ. ಯಾರಾದರೂ ಕೃಷಿ ಚಟುವಟಿಕೆ ಕೈಗೊಂಡರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ತಹಸೀಲ್ದಾರ್ ನಾಮಫಲಕವನ್ನು ಅಳವಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net