

ನಂಜನಗೂಡು: ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಲ್ಲಿ ಬಿಹಾರ ಹಾಗೂ ಉತ್ತರಪ್ರದೇಶ ಮೂಲದಿಂದ ಕಟ್ಟಡ ನಿರ್ಮಾಣಕ್ಕಾಗಿ ಬಂದಿದ್ದ 300ಕ್ಕೂ ಹೆಚ್ಚು ವಲಸೆ ಕಾರ್ಮಿಕರು ತವರಿಗೆ ತೆರಳಲು ವ್ಯವಸ್ಥೆ ಮಾಡಿಕೊಡುವಂತೆ ಬುಧವಾರ ಕಾರ್ಖಾನೆಯ ಗೇಟ್ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ ಒಂದೂವರೆ ತಿಂಗಳಿಂದ ನಮಗೆ ಕೂಲಿಯಿಲ್ಲದೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೇ ಪರಿತಪಿಸುವಂತಾಗಿದೆ. ನಮ್ಮೆಲ್ಲರನ್ನು ರೈಲಿನ ಮೂಲಕ ತವರಿಗೆ ಕಳುಹಿಸಿಕೊಡಲು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಬಿಳಿಗೆರೆ ಠಾಣೆ ಪಿಎಸ್‌ಐ ಆಕಾಶ್ ಮಾತನಾಡಿ, ಮೇ 5ರಂದು ನಡಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿದ ನಿಮಗೆ ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್ ಜಿಲ್ಲಾಧಿಕಾರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದರು. ಅಂತಾರಾಜ್ಯಕ್ಕೆ ತೆರಳುವವರು ಕಡ್ಡಾಯವಾಗಿ ಸೇವಾಸಿಂಧು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ, ಪರಿಶೀಲನೆ ಹಾಗೂ ತಪಾಸಣೆ ನಡೆಸಿದ ನಂತರ ತೆರಳಲು ಅವಕಾಶವಿರುತ್ತದೆ. ಈ ಎಲ್ಲ ಹಂತಗಳು ಪೂರ್ಣಗೊಳಿಸಲು ಕಾಲಾವಕಾಶ ಬೇಕಾಗುತ್ತದೆ. ಅಲ್ಲದೆ ಸೇವಾಸಿಂಧು ಆ್ಯಪ್‌ನಲ್ಲಿ ವಿವರವನ್ನು ಅಪ್‌ಲೋಡ್ ಮಾಡುವ ಹೊಣೆಯನ್ನು ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯೇ ನಿರ್ವಹಿಸಿದೆ. ಅದೆಲ್ಲವೂ ಪೂರ್ಣಗೊಳಿಸಿ ಒಪ್ಪಿಗೆ ಪಡೆದ ಬಳಿಕವಷ್ಟೆ ಕಳುಹಿಸಲು ಸಾಧ್ಯ. ಹೀಗಾಗಿ ನೀವೆಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡಿದರು.
ನಿಮ್ಮನ್ನು ತವರಿಗೆ ಕಳುಹಿಸಿಕೊಡಲು ಈಗಾಗಲೇ ಜಿಲ್ಲಾಡಳಿತ ಕ್ರಮವಹಿಸಿದೆ. ಆ ಬಗ್ಗೆ ಸಂಪೂರ್ಣ ವಿವರದ ಬಗ್ಗೆ ಮುಖಂಡರನ್ನು ತಹಸೀಲ್ದಾರ್ ಬಳಿ ಕರೆದುಕೊಂಡು ಹೋಗಿ ಮನವರಿಕೆ ಮಾಡಿಸಲಾಗುವುದು. ಹೀಗಾಗಿ ನಿಮಗೆ ನಿಗದಿ ಮಾಡಿರುವ ಶೆಡ್‌ಗಳಿಗೆ ತೆರಳುವಂತೆ ಮನವಿ ಮಾಡಿದರು.
ಬಳಿಕ ಅಲ್ಲಿಂದ ಕೆಲವು ಮುಖಂಡರನ್ನು ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್ ಬಳಿ ಕರೆದೊಯ್ದು ಈವರೆಗೆ ಜಿಲ್ಲಾಡಳಿತ ಕ್ರಮವಹಿಸಿರುವ ಕುರಿತು ಮಾಹಿತಿ ನೀಡಲಾಯಿತು.