ಸ್ಥಳ ಪರಿಶೀಲನೆ ಬಳಿಕ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳು : DK ಸುರೇಶ್

Untitled design (99)
Published on: 

ಚನ್ನಪಟ್ಟಣ: ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ BMRCL ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು” ಎಂದು ಮಾಜಿ ಸಂಸದ ಹಾಗೂ ಬಮುಲ್ ಅಧ್ಯಕ್ಷ DK ಸುರೇಶ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವು ಈಗಾಗಲೇ ಈ ವಿಚಾರವಾಗಿ ಅರ್ಜಿ ಸಲ್ಲಿಸಿದ್ದು, ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಇದಾದ ನಂತರ ನಮಗೂ ಮೆಟ್ರೋ ಸಂಸ್ಥೆ ನಡುವೆ ಒಪ್ಪಂದ ಆಗಬೇಕಿದೆ. ಹೊರರಾಜ್ಯದ ಸಂಸ್ಥೆಗಳು ಹೆಚ್ಚಿನ ಬಾಡಿಗೆ ನೀಡುವ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಹೀಗಾಗಿ ಮೆಟ್ರೋದವರು ನಮ್ಮಿಂದಲೂ ಹೆಚ್ಚಿನ ಬಾಡಿಗೆ ನಿರೀಕ್ಷೆ ಮಾಡುತ್ತಾರೆ. ಇದು ರೈತರ ಸಂಸ್ಥೆಯಾಗಿರುವುದರಿಂದ ಕಡಿಮೆ ಬಾಡಿಗೆ ನೀಡಬೇಕು ಎಂದು ಡಿಸಿಎಂ ಹಾಗೂ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇನೆ. ಸ್ಥಳ ಪರಿಶೀಲನೆ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಮಾರುಕಟ್ಟೆಗೆ

ಈಗ ಪ್ರಾಯೋಗಿಕವಾಗಿ ಬೆಂಗಳೂರಿನ ಒಂದು ಭಾಗ ಆಯ್ಕೆ ಮಾಡಲು ಸೂಚಿಸಿದ್ದೇನೆ. ಇದರ ವೆಚ್ಚ ಹೆಚ್ಚಾಗಿದ್ದು, ರಾಜ್ಯಮಟ್ಟದಲ್ಲಿ ಚರ್ಚೆ ಮಾಡಬೇಕಿದೆ. ನಮ್ಮ ಮಾರುಕಟ್ಟೆ ವ್ಯಾಪ್ತಿಯ ಜಯನಗರ, ಬಿಟಿಎಂ ಲೇಔಟ್ ಸೇರಿದಂತೆ ಯಾವ ಸ್ಥಳ ಸೂಕ್ತ ಎಂಬುದನ್ನು ಮಾರುಕಟ್ಟೆ ಅಧಿಕಾರಿಗಳು ಸೂಕ್ತ ಪರಿಶೀಲನೆ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಬೆಂಗಳೂರಿನ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡುತ್ತೇವೆ. ಸ್ವಲ್ಪ ನಷ್ಟವಾದರೂ ಪರಿಸರ ರಕ್ಷಣೆಗೆ ದೊಡ್ಡ ಹೆಜ್ಜೆ ಇಡಲಾಗುವುದು.

ಪರಿಸರದ ದೃಷ್ಟಿಯಿಂದ ಇದನ್ನು ನಾವು ಮಾಡಬೇಕು. ರಾಜ್ಯದಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿರುವುದೇ ಹಾಲಿನ ಪ್ಯಾಕೆಟ್ ಗಳಿಂದ. ನಿತ್ಯ ಕೋಟ್ಯಂತರ ಪ್ಲಾಸ್ಟಿಕ್ ಕವರ್ ತ್ಯಾಜ್ಯವಾಗಿ ಬೀಳುತ್ತಿವೆ. ಇವುಗಳನ್ನು ಕೊಳೆಯುವಂತೆ ಮಾಡುವ ವ್ಯವಸ್ಥೆ ಮಾಡುವುದು ನಮ್ಮ ಚಿಂತನೆ. ಈ ಪ್ರಾಯೋಗಿಕ ಪ್ರಯತ್ನದ ನಂತರ ಸರ್ಕಾರದ ಮುಂದೆ ಈ ಪ್ರಸ್ತಾಪವನ್ನಿಟ್ಟು ಸಾರ್ವಜನಿಕರ ವಿಶ್ವಾಸ ಗಳಿಸಿ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ತಿಳಿಸಿದರು.

ಶಾಸಕರ ಸಭೆ ಸಿಎಂ ಪರಮೋಚ್ಛ ಅಧಿಕಾರ

ಡಿಸಿಎಂ ಹೊರಗಿಟ್ಟು ಸಿಎಂ ಶಾಸಕರ ಸಭೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ಆ ರೀತಿ ಏನಿಲ್ಲ. ಶಾಸಕರ ಸಭೆ ಮಾಡಲು ಮುಖ್ಯಮಂತ್ರಿಗಳಿಗೆ ಪರಮೋಚ್ಛ ಅಧಿಕಾರವಿದೆ. ಶಾಸಕರ ಸಮಸ್ಯೆ ಆಲಿಸುವುದು ಮೊದಲಿನಿಂದಲೂ ನಡೆಸಿಕೊಂಡು ಬರಲಾಗಿದೆ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶಾಸಕರ ಅಹವಾಲು ಸ್ವೀಕರಿಸುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆ ಎಂದರು.(ಏಜೆನ್ಸೀಸ್​)