

ಬೆಂಗಳೂರು: ಪರಿಸರ ಜಾಗೃತಿ ಮೂಡಿಸಲು ಸೈಕಲ್ನಲ್ಲಿ ದೇಶ ಪರ್ಯಟನೆ ನಡೆಸುತ್ತಿರುವ ಒಡಿಶಾ ಮೂಲದ ನಂದಿ ಎಂಬ ಯುವಕ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದರು.
ಕಳೆದೊಂದು ವರ್ಷದಿಂದ ಸೈಕಲ್ ತುಳಿಯುತ್ತ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದು, ಕಳೆದ ಗುರುವಾರ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಪ್ರಯಾಣಿಸಿದ್ದಾರೆ. ಅಲ್ಲಿಂದ ಒಡಿಶಾಗೆ ಮರಳಿ ಅಭಿಯಾನ ಅಂತ್ಯಗೊಳಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಛತ್ತೀಸ್ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ, ಬಿಹಾರ್, ಹಿಮಾಚಲ ಪ್ರದೇಶ, ರಾಜಸ್ಥಾನ, ಗೋವಾ, ಕೇರಳ, ತಮಿಳುನಾಡು ಇತ್ಯಾದಿ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಸೈಕಲ್ ತುಳಿಯುವುದೇ ನನ್ನ ಉದ್ಯೋಗ. ಪ್ರಯಾಣದ ವೇಳೆ ಪೆಟ್ರೋಲ್ ಬಂಕ್, ಪೊಲೀಸ್ ಠಾಣೆ, ಆಶ್ರಮ, ದೇವಾಲಯಗಳಲ್ಲಿ ರಾತ್ರಿ ತಂಗುತ್ತೇನೆ. ಬೆಳಗ್ಗೆ ಎದ್ದು ಮತ್ತೆ ಸವಾರಿ ಆರಂಭಿಸುತ್ತೇನೆ. ದೇಶದ ವಿವಿಧತೆಯನ್ನು ಅರಿಯುವುದು ಹಾಗೂ ಆ ಬಗ್ಗೆ ಜನಜಾಗೃತಿ ಮೂಡಿಸುವುದು ನನ್ನ ಗುರಿ ಎಂದಿದ್ದಾರೆ.