ಸಾಮಾನ್ಯ ರೋಗ ಚಿಕಿತ್ಸೆಗೆ ನಮ್ಮ ಕ್ಲಿನಿಕ್: ತ್ವರಿತ ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ; ನಗರೋತ್ಥಾನ ಪೂರ್ಣಕ್ಕೆ ಗಡುವು

CM
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ, ಪೌರಾಡಳಿತ ಇಲಾಖೆಗಳ ಬಜೆಟ್ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ನಡೆಯಿತು. ಸಚಿವರಾದ ಬೈರತಿ ಬಸವರಾಜ, ಎಂಟಿಬಿ ನಾಗರಾಜ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ವ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್​ಎನ್ ಪ್ರಸಾದ್, ಇನ್ನಿತರ ಅಧಿಕಾರಿಗಳು ಇದ್ದರು.
Published on

ಬೆಂಗಳೂರು: ರಾಜ್ಯದಲ್ಲಿ ಸಾಮಾನ್ಯ ರೋಗ-ರುಜಿನಗಳ ಚಿಕಿತ್ಸೆಗಾಗಿ ‘ನಮ್ಮ ಕ್ಲಿನಿಕ್’ ಸ್ಥಾಪನೆಯಾಗಲಿದ್ದು, ಬೆಂಗಳೂರಿನಲ್ಲಿ 200, ಇತರ ತಾಲೂಕುಗಳಲ್ಲಿ 238 ಕ್ಲಿನಿಕ್ ಕಾರ್ಯಾರಂಭಿಸಲಿವೆ. ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಾರಿಗೆ, ನಗರಾಭಿವೃದ್ಧಿ, ಪೌರಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಬಜೆಟ್ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ನಡೆಯಿತು.

ಸಾಮಾನ್ಯ ರೋಗಗಳಿಂದ ಬಳಲುವ ಜನರಿಗೆ ಚಿಕಿತ್ಸೆ ನೀಡಲು ಉದ್ದೇಶಿತ ‘ನಮ್ಮ ಕ್ಲಿನಿಕ್’ಗಳನ್ನು ತ್ವರಿತವಾಗಿ ಸ್ಥಾಪಿಸಲು ಕ್ರಮವಹಿಸಬೇಕು. ಇಲಾಖೆಯ ಇತರ ಯೋಜನೆಗಳನ್ನು ನಿಗದಿತ ಕಾಲಾವಧಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಬೆಂಗಳೂರಿಗೆ ಪ್ರತ್ಯೇಕ ವಿಭಾಗ: ಇಲಾಖೆಯಡಿ ಬೆಂಗಳೂರು ಮಹಾನಗರ ಆರೋಗ್ಯ ಸೇವಾ ವಿಭಾಗ ರಚಿಸಿ, ಸರ್ಕಾರಿ ಆರೋಗ್ಯ ಸೇವೆಯನ್ನು ಉನ್ನತೀಕರಿಸಬೇಕು. ನಗರ ವೇಗವಾಗಿ ಬೆಳೆಯುತ್ತಿರುವ ಕಾರಣ ಅದಕ್ಕೆ ತಕ್ಕಂತೆ ನಿರ್ವಹಣೆಯಲ್ಲಿ ಸುಧಾರಣೆ, ಆರೋಗ್ಯ ಸೇವೆಗಳನ್ನು ಸರಿಯಾಗಿ ಒದಗಿಸಬೇಕು ಎಂದರು. ನಿಮ್ಹಾನ್ಸ್ ಸಹಯೋಗದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ಡಿಮಾನ್ಸ್ ಸಹಯೋಗದಲ್ಲಿ ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಮೆದುಳಿನ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಶುಚಿ ಯೋಜನೆಯಡಿ ಉಚಿತವಾಗಿ ವಿತರಿಸುವ ಸ್ಯಾನಿಟರಿ ಪ್ಯಾಡ್​ಗಳನ್ನು ಸ್ವಸಹಾಯ ಸಂಘಗಳಿಂದ ಖರೀದಿಸಬೇಕು. ಈ ಕುರಿತು ಮಾನದಂಡಗಳನ್ನು ಸ್ವಸಹಾಯ ಸಂಘಗಳಿಗೆ ತಿಳಿಸಬೇಕು ಎಂದು ನಿರ್ದೇಶಿಸಿದರು.

ಎರಡು ವರ್ಷ ಗಡುವು: ‘ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ’ಯಡಿ ನಗರ ಸ್ಥಳೀಯ ಸಂಸ್ಥೆಗಳ ಮೂಲ ಸವಲತ್ತು ಅಭಿವೃದ್ಧಿ ಕಾಮಗಾರಿಗಳನ್ನು ಮೂರು ವರ್ಷಗಳ ಬದಲಿಗೆ ಎರಡು ವರ್ಷಗಳಲ್ಲಿಯೇ ಪೂರ್ಣಗೊಳಿಸಬೇಕು ಎಂಬ ಗಡುವು ಸಿಎಂ ಬೊಮ್ಮಾಯಿ ವಿಧಿಸಿದ್ದಾರೆ.

ಪ್ರಸ್ತಾವಿತ ಯೋಜನೆಯಡಿ 291 ನಗರ ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಒಟ್ಟು 3,885 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯನ್ನು 2024ರಲ್ಲಿ ಪೂರ್ಣಗೊಳಿಸಲು ಸೂಚಿಸಿದರು.

ವಿದ್ಯಾನಿಧಿ ನೆರವು: ವಾಣಿಜ್ಯ ವಾಹನ (ಯೆಲ್ಲೋ ಬೋರ್ಡ್)ಗಳ ಚಾಲಕರ ಮಕ್ಕಳಿಗೆ ‘ರೈತ ವಿದ್ಯಾನಿಧಿ’ ಮಾದರಿಯ ವಿದ್ಯಾರ್ಥಿ ವೇತನ ನೀಡಲು ಸಿದ್ಧತೆಗಳಾಗುತ್ತಿದ್ದು, ಇ-ಆಡಳಿತ ಇಲಾಖೆಯೊಂದಿಗೆ ಸಮಾಲೋಚಿಸಲು ಸಭೆ ಕರೆಯಲಾಗುವುದು ಸಿಎಂ ಬೊಮ್ಮಾಯಿ ತಿಳಿಸಿದರು.

ಬಜೆಟ್ ಅನುಷ್ಠಾನ ಸಭೆ ಮುಖ್ಯಾಂಶಗಳು

  • ಕೇಂದ್ರ ಅಮೃತ್ 2.0 ಯೋಜನೆಯಡಿ 287 ನಗರಗಳ ಅಭಿವೃದ್ಧಿಗೆ ಐದು ವರ್ಷಗಳಲ್ಲಿ ರಾಜ್ಯದ ಪಾಲು ಸೇರಿ ಒಟ್ಟು 9260 ಕೋಟಿ ರೂ. ಅನುದಾನ ನಿಗದಿ. ಒಳಚರಂಡಿ ಮತ್ತು ನೀರು ವ್ಯವಸ್ಥೆ. ತಾಂತ್ರಿಕವಾಗಿ ಕಾರ್ಯಸಾಧ್ಯವಾಗಿರುವ ನಗರಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿ ಕಾಮಗಾರಿ ಪ್ರಾರಂಭಿಸಬೇಕು
  • ಬಿಬಿಎಂಪಿಗೆ 6,000 ಪೌರ ಕಾರ್ವಿುಕರ ನೇಮಕಕ್ಕೆ ಹಣಕಾಸು ಇಲಾಖೆ ಅಸ್ತು. ಗುತ್ತಿಗೆ ಸಿಬ್ಬಂದಿಗೆ ಆದ್ಯತೆ ನೀಡಲು ರೋಸ್ಟರ್ ವಿನಾಯಿತಿಗೆ ಕ್ರಮ, ಪೌರ ಕಾರ್ವಿುಕರಿಗೆ 2,000 ರೂ. ಹಾರ್ಡ್​ಷಿಪ್ ಭತ್ಯೆ ನೀಡಬೇಕು
  • ರಾಜ್ಯದ ಎಲ್ಲ ವಿಭಾಗಗಳಲ್ಲಿ ‘ಇಂಟಿಗ್ರೇಟೆಡ್ ಟೌನ್​ಷಿಪ್’ ನಿರ್ವಿುಸುವ ಯೋಜನೆ ಅನುಷ್ಠಾನಕ್ಕೆ ಅಭಿವೃದ್ಧಿ ಆಯಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ.
  • ಸಾರಿಗೆ ನಿಗಮಗಳ ಪುನಶ್ಚೇತನಕ್ಕಾಗಿ ರಚಿತ ತಜ್ಞರ ವರದಿ ನಿರೀಕ್ಷೆಯೊಂದಿಗೆ ಬೇಕಾದ ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡಬೇಕು.
  • ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ವಿಜಯಪುರ, ಬೀದರ್, ಯಾದಗಿರಿ ಮತ್ತು ದಾವಣಗೆರೆಗಳಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಸ್ವಯಚಾಲಿತ ಚಾಲನಾ ಪಥಗಳ ನಿರ್ವಣಕ್ಕೆ ಡಿಪಿಆರ್​ಗೆ ಅನುಮೋದನೆ ಪಡೆದು ಅನುಷ್ಠಾನಕ್ಕೆ ತರಬೇಕು.
  • ರಾಜ್ಯ ಹೆದ್ದಾರಿಗಳ ಅಕ್ಕಪಕ್ಕ ಪ್ರಯಾಣಿಕರಿಗೆ ಅತ್ಯುತ್ತಮ ಮೂಲ ಸೌಕರ್ಯ ಒದಗಿಸಿ, ಈ ಸಂಕೀರ್ಣಗಳನ್ನು ಚೆನ್ನಾಗಿ ನಿರ್ವಹಿಸಿ ಬ್ರಾ್ಯಂಡಿಂಗ್ ಮಾಡಬೇಕು.
  • ರಾಜ್ಯದಲ್ಲಿ 30 ಸಾವಿರ ರೂ.ಗಳಿಗಿಂತ ಹೆಚ್ಚು ತ್ರೖೆಮಾಸಿಕ ತೆರಿಗೆ ಪಾವತಿಸುವ ಸಾರಿಗೆ ವಾಹನಗಳಿಗೆ ಮಾಸಿಕ ತೆರಿಗೆ ಪಾವತಿಗೆ ಪಾವತಿಸಲು ಮೋಟಾರು ವಾಹನ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, 40,405 ಮಾಲೀಕರು ಪ್ರಯೋಜನ ಪಡೆದಿದ್ದಾರೆ.
  • ಮೋಟಾರು ವಾಹನ ತೆರಿಗೆ ಪಾವತಿ ಅವಧಿ ವಿಸ್ತರಿಸಿ, ಕಾನೂನು ತಿದ್ದುಪಡಿ ಮಾಡಿರುವುದರಿಂದ 1.07 ಲಕ್ಷ ವಾಹನಗಳ ಮಾಲೀಕರಿಗೆ ಅನುಕೂಲ.

291 ನಗರಗಳ ಅಭಿವೃದ್ಧಿಗೆ 2,993 ಕೋಟಿ ರೂ. ನಿಗದಿ

ಬೆಂಗಳೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ರಾಜ್ಯದ 291 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಿರುವ 2,993 ಕೋಟಿ ರೂ. ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ ಇಲಾಖೆಯು ಅನುಮೋದನೆ ನೀಡಿದೆ.

ಪೌರಾಡಳಿತ ಸಚಿವ ಎಂಟಿಬಿ ನಾಗರಾಜು ಅಧ್ಯಕ್ಷತೆ ಯಲ್ಲಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಿಎಂ ಅಮೃತ ನಗರೋತ್ಥಾನ ಯೋಜನೆ 4ನೇ ಹಂತದ ಯೋಜನೆಗಳ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ ಕ್ರಿಯಾ ಯೋಜನೆಗಳಿಗೆ ಒಪ್ಪಿಗೆ ನೀಡಲಾಯಿತು. ಚಿಕ್ಕಮಗಳೂರು ಜಿಲ್ಲೆಯ 80.75 ಕೋಟಿ ರೂ., ಬೆಂಗಳೂರು ನಗರ ಜಿಲ್ಲೆಯ 123.25 ಕೋಟಿ ರೂ., ಕೋಲಾರ ಜಿಲ್ಲೆ (ಬಂಗಾರ ಪೇಟೆ ಪುರಸಭೆ ಮಾತ್ರ) 8.5 ಕೋಟಿ ರೂ., ತುಮಕೂರು ಜಿಲ್ಲೆಯ (ತಿಪಟೂರು ನಗರಸಭೆ ಮತ್ತು ಹುಳಿಯಾರ್ ಪಟ್ಟಣ ಪಂಚಾಯಿತಿ ಹೊರತುಪಡಿಸಿ) 72.25 ಕೋಟಿ ರೂ., ಹಾಸನ ನಗರಸಭೆಗೆ ಹೆಚ್ಚುವರಿ ಮೊತ್ತ 6 ಕೋಟಿ ರೂ., ಬೆಳಗಾವಿ (ಚಿಕ್ಕೋಡಿ ಪುರಸಭೆ ಮಾತ್ರ) 8.5 ಕೋಟಿ ರೂ., ಉತ್ತರ ಕನ್ನಡ (ಕಾರವಾರ, ದಾಂಡೇಲಿ, ಕುಮಟ, ಅಂಕೋಲ, ಹೊನ್ನಾವರ ನಗರ ಸ್ಥಳೀಯ ಸಂಸ್ಥೆಗಳು ಮಾತ್ರ) 80.75 ಕೋಟಿ ರೂ. ಹಾಗೂ ಕಲಬುರಗಿ ಜಿಲ್ಲೆಯ 97.75 ಕೋಟಿ ರೂ.ಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

ನಗರೋತ್ಥಾನ 4ನೇ ಹಂತದ ಯೋಜನೆಯ 3,885 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಕಳೆದ ಜನವರಿಯಲ್ಲಿ ಅನುಮೋದನೆ ನೀಡಿತ್ತು. ಅದಕ್ಕೆ ಪೂರಕವಾಗಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಕ್ರಿಯಾ ಯೋಜನೆಗಳು ಸಲ್ಲಿಕೆಯಾಗಿದ್ದವು. ಈ ಯೋಜನೆಯಡಿ 117 ಪಟ್ಟಣ ಪಂಚಾಯತಿಗಳು ತಲಾ 5 ಕೋಟಿ ರೂ., 124 ಪುರಸಭೆಗಳು ತಲಾ 10 ಕೋಟಿ ರೂ. ಹಾಗೂ 38 ನಗರಸಭೆಗಳು ತಲಾ 30 ಕೋಟಿ ರೂ., 23 ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು 1ನೇ ದರ್ಜೆ ನಗರಸಭೆಗಳು ತಲಾ 40 ಕೋಟಿ ರೂ. ಪಡೆಯಲಿವೆ. ಈ ಹಣದಲ್ಲಿ 2022-23ರಿಂದ 2023-24ನೇ ಸಾಲಿನ ಹಣಕಾಸು ವರ್ಷದವರೆಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಮಳೆ ನೀರು ಚರಂಡಿ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಳ್ಳಲಿವೆ. ಯೋಜನೆ ಜಾರಿಗೆ ಈಗಾಗಲೆ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾವಾರು ಯೋಜನಾ ಸಮಾಲೋಚಕರನ್ನು ವಿಸõತ ಯೋಜನಾ ವರದಿ ತಯಾರಿಕೆ, ಟೆಂಡರ್ ಪ್ರಕ್ರಿಯೆಯಲ್ಲಿ ನೆರವು, ಕ್ರಿಯಾ ಯೋಜನೆ ತಯಾರಿಕೆ, ಅನುಷ್ಠಾನ ಮತ್ತು ಮೇಲ್ವಿಚಾರಣೆ ಹಾಗೂ ಗುಣಮಟ್ಟ ನಿಯಂತ್ರಣಕ್ಕಾಗಿ ನೇಮಕ ಮಾಡಿಕೊಳ್ಳಲು ಆಸಕ್ತ ಯೋಜನಾ ಸಮಾಲೋಚಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಪೌರಾಡಳಿತ ನಿರ್ದೇಶ ನಾಲಯದ ಮುಖ್ಯ ಇಂಜಿನಿಯರ್ ಸತ್ಯನಾರಾಯಣ ಮತ್ತಿತ್ತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಖಾದಿ ನೇಕಾರರಿಗೆ ಪೋ›ತ್ಸಾಹ: ಖಾದಿ ನೇಕಾರರಿಗೆ ಕಳೆದೆರಡು ವರ್ಷಗಳಿಂದ ನೀಡಬೇಕಿದ್ದ 24.26 ಕೋಟಿ ರೂ. ಬಾಕಿ ಬಿಡು ಗಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net