

ಮುಂಬೈ: ಮಹಾರಾಷ್ಟ್ರದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ರಾಜ್ಯದ ಶಾಸಕರುಗಳು ತಮ್ಮ ತಮ್ಮ ಕ್ಷೇತ್ರದ ಬೇಡಿಕೆಗಳನ್ನು ಸದನದ ಮುಂದಿಡುತ್ತಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವ ನಮಿತಾ ಮುಂಡದ ಅಧಿವೇಶನದಲ್ಲಿ ಪಾಲ್ಗೊಂಡಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆಯನ್ನು ಪಡೆಯಲಾರಂಭಿಸಿದ್ದಾರೆ.
"ಬಜೆಟ್ ಅಧಿವೇಶನ ನಡೆಯುತ್ತಿದೆ. ಇದರಲ್ಲಿ ನಾನು ಪಾಲ್ಗೊಳ್ಳುವುದು ಶಾಸಕಿಯಾಗಿ ನನ್ನ ಕರ್ತವ್ಯ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ನಾನು ಸದನದಲ್ಲಿ ಮಾತನಾಡಬೇಕಿದೆ. ಸದನದ ಗಮನವನ್ನು ನನ್ನ ಕ್ಷೇತ್ರದತ್ತ ಹರಿಸಬೇಕಿದೆ." ಎಂದು ಶಾಸಕಿ ನಮಿತಾ ಹೇಳಿದ್ದಾರೆ.
ಬೇರೆ ಗರ್ಭಿಣಿಯರಂತೆ ತಮಗೂ ಸಹ ಅನೇಕ ತೊಂದರೆಗಳಿದ್ದು ವೈದ್ಯರ ಸಲಹೆಯ ಮೇರೆಗೆ ಆಕೆ ತನ್ನ ಆರೈಕೆ ಮಾಡಿಕೊಳ್ಳುತ್ತಿದ್ದು, ತನ್ನ ಕ್ಷೇತ್ರವನ್ನೂ ಸಹ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಎನ್ಸಿಪಿ ಪಕ್ಷದಿಂದ ಗೆದ್ದು ಸಚಿವೆಯಾಗಿದ್ದ ವಿಮಲ ಮುಂಡದ ಅವರ ಸೊಸೆಯಾಗಿರುವ ನಮಿತಾ 2019ರ ವಿಧಾನ ಸಭಾ ಚುನಾವಣೆಯಲ್ಲಿ ಎನ್ಸಿಪಿ ಪಕ್ಷದ ಪರವಾಗಿ ಬೀಡ್ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು. ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ಬಿಜೆಪಿ ಸೇರಿದ ಅವರು ಗೆಲುವು ಸಾಧಿಸಿಕೊಂಡಿದ್ದರು. (ಏಜೆನ್ಸೀಸ್)