

ಜಿನೇವಾ: ಕರೊನಾ ವೈರಸ್ನ ವಿವಿಧ ಪ್ರಭೇದಗಳಿಗೆ ‘ಸುಲಭವಾಗಿ ಉಚ್ಚರಿಸಲು ಸಾಧ್ಯವಾಗುವ’ ಹಾಗೂ ‘ಕಳಂಕಿತ’ ಹಣೆಪಟ್ಟಿ ಬಾರದಂಥ ಹೆಸರುಗಳನ್ನು ಇಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಿರ್ಧರಿಸಿದೆ. ಸಾರ್ಸ್ ಸಿಒವಿ-2ರ ‘ಆಸಕ್ತಿದಾಯಕ ಪ್ರಭೇದ’ (ವೆರಿಯಂಟ್ ಆಫ್ ಇಂಟರೆಸ್ಟ್- ವಿಒಐ) ಮತ್ತು ‘ಕಳವಳಕಾರಿ ಪ್ರಭೇದ’ (ವೆರಿಯಂಟ್ ಆಫ್ ಕನ್ಸರ್ನ್-ವಿಒಸಿ) ಎಂದು ನಾಮಕರಣ ಮಾಡಲಾಗಿದೆ. ಈ ಎರಡು ರೂಪಾಂತರಿ ವಿಭಾಗಗಳಿಗೆ ಗ್ರೀಕ್ ಅಕ್ಷರಮಾಲೆಯ ಹೆಸರಿಡಲಾಗಿದೆ. ಅನೇಕ ದೇಶಗಳು ಮಾಡಿದ ಮನವಿಯನ್ನು ಪುರಸ್ಕರಿಸಿ ಡಬ್ಲ್ಯುಎಚ್ಒ ಈ ಕ್ರಮಕ್ಕೆ ಮುಂದಾಗಿದೆ. ನಾಲ್ಕು ಪ್ರಭೇದಗಳನ್ನು ಗುರುತಿಸಲು ಗ್ರೀಕ್ ಅಕ್ಷರಮಾಲೆಯ ಅಕ್ಷರಗಳಾದ ಆಲ್ಪಾ, ಬೀಟಾ, ಗಾಮಾ, ಡೆಲ್ಟಾಗಳನ್ನು ಬಳಸಿದೆ.
ಆಕ್ಷೇಪ ಎತ್ತಿದ್ದ ಭಾರತ: ಭಾರತದಲ್ಲಿ ಮೊದಲಿಗೆ ಪತ್ತೆಯಾಗಿದ್ದ ವಿಒಸಿ ಬಿ.1.617 ಪ್ರಭೇದಕ್ಕೆ ‘ಭಾರತೀಯ ಪ್ರಭೇದ’ ಎಂದು ಮಾಧ್ಯಮಗಳಲ್ಲಿ ಉಲ್ಲೇಖ ವಾಗುತ್ತಿರುವುದಕ್ಕೆ ಭಾರತ ಸರ್ಕಾರ ಮೇ 12ರಂದು ಆಕ್ಷೇಪ ವ್ಯಕ್ತಪಡಿಸಿತ್ತು. ಡಬ್ಲ್ಯುಎಚ್ಒ ಈ ರೀತಿ ಎಲ್ಲೂ ಉಲ್ಲೇಖಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.