ಜಂಬಗಾರು ನಿಲ್ದಾಣಕ್ಕೆ ಲೋಹಿಯಾ ಹೆಸರಿಡಿ

Kallur megharaj
Published on

ಶಿವಮೊಗ್ಗ: ಸಾಗರದ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಹಿರಿಯ ಸಮಾಜವಾದಿ ರಾಮಮನೋಹರ ಲೋಹಿಯಾ ಹೆಸರು ನಾಮಕರಣ ಮಾಡಬೇಕು ಎಂದು ಶಾಂತವೇರಿ ಗೋಪಾಲ ಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಅಧ್ಯಕ್ಷ ಕಲ್ಲೂರು ಮೇಘರಾಜ್ ಆಗ್ರಹಿಸಿದರು.

ಜಂಬಗಾರು ನಿಲ್ದಾಣಕ್ಕೆ ಲೋಹಿಯಾ ಹೆಸರಿಡುವ ಸಂಬಂಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದೇವೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೂ ಮನವಿ ಮಾಡಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1951ರಲ್ಲಿ ನಡೆದಿದ್ದ ಉಳುವವನೇ ಹೊಲದೊಡೆಯ ಸಿದ್ಧಾಂತದ ಐತಿಹಾಸಿಕ ಕಾಗೋಡು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಲೋಹಿಯಾ, ಅಂದು ರಾತ್ರಿ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. 2000ರ ಜೂ.13ರಂದು ಜಂಬಗಾರು ರೈಲ್ವೆ ನಿಲ್ದಾಣದ ಎದುರು ನಮ್ಮ ಟ್ರಸ್ಟ್ ಹಾಗೂ ಅಂದು ಜಿಪಂ ಸದಸ್ಯರಾಗಿದ್ದ ಅರುಣ್‌ಪ್ರಸಾದ್ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾಭಿವೃದ್ಧಿ ಸಮಿತಿ ಕಾರ್ಯಕ್ರಮ ಆಯೋಜಿಸಿ ರೈಲ್ವೆ ನಿಲ್ದಾಣಕ್ಕೆ ಲೋಹಿಯಾ ಹೆಸರಿಡುವ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.

ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಸಾಗರದ ಕಾಗೋಡು ಸತ್ಯಾಗ್ರಹ ಐತಿಹಾಸಿಕ ಹೋರಾಟ. ಲೋಹಿಯಾ ಅವರ ಆಗಮನದಿಂದ ಈ ಹೋರಾಟ ತಾತ್ವಿಕ ಅಂತ್ಯಕಂಡು ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ಬರಲು ಕಾರಣವಾಗಿತ್ತು. ಲೋಹಿಯಾ ಅವರ ಹೆಸರಿಡಲು ನಾವು ಕೂಡ ಹೋರಾಟ ಮಾಡುತ್ತಿದ್ದೇವೆ. ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಎಚ್.ಎಂ.ಸಂಗಯ್ಯ, ಜನಮೇಜಿರಾವ್, ಆದಿಶೇಷ, ಕೋಡ್ಲು ಶೀಧರ್, ನಾಗೇಶ್‌ರಾವ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net