

ಬೆಂಗಳೂರು: ಕೊಪ್ಪಳ ಜಿಲ್ಲೆಯ ಮೂರು ರೈಲು ನಿಲ್ದಾಣಗಳಿಗೆ ಮೂರು ಹೆಸರುಗಳ ಮರು ನಾಮಕರಣ ಬಯಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹೆಸರುಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಶಿಫಾರಸು ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ರೈಲು ನಿಲ್ದಾಣಕ್ಕೆ ‘ಅಂಜನಾದ್ರಿ’ (ಕಿಷ್ಕಿಂದಾ), ಮುನಿರಾಬಾದ್ ರೈಲು ನಿಲ್ದಾಣದ ಹುಲಿಗೆಮ್ಮ ದೇವಿ ಮತ್ತು ಬಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮಗಾಂಧಿ ನಿಲ್ದಾಣವೆಂದು ಮರು ನಾಮಕರಣ ಮಾಡಲು ಕೋರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಮರು ನಾಮಕರಣ ಮಾಡುವ ಹೆಸರುಗಳನ್ನು ಶಿಫಾರಸು ಮಾಡಿದ್ದು, ಅವರ ಮೂಲಕ ಇದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಈ ಮೂರು ರೈಲು ನಿಲ್ದಾಣಗಳಿಗೆ ಮರು ನಾಮಕರಣ ಮಾಡುವುದರ ಹಿಂದೆ ಜನರ ಭಾವನೆಗಳಿಗೆ ಗೌರವ ನೀಡಿದಂತಾಗುತ್ತದೆ.
ಅಂಜನಾದ್ರಿಯು ರಾಮಾಯಣದಲ್ಲಿ ಬರುವ ಆಂಜನೇಯನ ಜನ್ಮ ಸ್ಥಳವಾಗಿದೆ. ಹುಲಿಗೆಮ್ಮದೇವಿ ಈ ಭಾಗದ ಪ್ರಸಿದ್ಧ ಜನಪದ ದೇವತೆ. ಹಾಗೆಯೇ ಮಹಾತ್ಮಗಾಂಧಿ ಅವರ ಹೆಸರಿಡುವುದರ ಹಿಂದೆ ಐತಿಹಾಸಿಕ ಕಾರಣವಿದೆ ಎಂದು ಎಂ.ಬಿ.ಪಾಟೀಲ ವಿವರಿಸಿದ್ದಾರೆ.