

ಅಹಮದಾಬಾದ್: ಡೊನಾಲ್ಡ್ ಟ್ರಂಪ್ ಅವರು ಸಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ (visitor's book) ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಗಾಂಧಿ ತತ್ವಗಳನ್ನು ಸಾರುವ ಸಬರಮತಿ ಆಶ್ರಮಕ್ಕೆ ಪತ್ನಿ ಮೆಲಾನಿಯಾ ಜತೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಅವರಿಗೆ ನರೇಂದ್ರ ಮೋದಿಯವರು ಹಲವು ವಿಚಾರಗಳನ್ನು ತಿಳಿಸಿದರು. ಚರಕ ಹೇಗೆ ಕಾರ್ಯ ಮಾಡುತ್ತದೆ ಎಂಬುದನ್ನೂ ವಿವರಿಸಿದರು. ಅಲ್ಲಿಯೇ ಇದ್ದ ಆಶ್ರಮದ ಸಿಬ್ಬಂದಿ ಕೂಡ ಟ್ರಂಪ್ ಜತೆ ಮಾತನಾಡಿದರು.
ಕೊನೆಯಲ್ಲಿ ಅಲ್ಲಿಂದ ಹೊರಡುವಾಗ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರು ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದು, ಸಹಿ ಮಾಡಿದರು.
ಈ ವೇಳೆ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆತ್ಮೀಯ ಸ್ನೇಹಿತ ಎಂದು ಉಲ್ಲೇಖಿಸಿ, ಕೃತಜ್ಞತಾ ಅಕ್ಷರಗಳನ್ನು ಅದರಲ್ಲಿ ಬರೆದಿದ್ದಾರೆ. ಆ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಂತಹ ಒಂದು ಅದ್ಭುತ ಭೇಟಿಯನ್ನು ಸಾಧ್ಯವಾಗಿಸಿದ ನನ್ನ ಅತ್ಯುತ್ತಮ, ನೆಚ್ಚಿನ ಸ್ನೇಹಿತ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ. (ಏಜೆನ್ಸೀಸ್)