

ಕೋಲಾರ: ನಾಕ್ಷ ಯೋಜನೆ ಕೇಂದ್ರ ಸರ್ಕಾರದ ಬಹುಪಯೋಗಿ ಕಾರ್ಯಕ್ರಮವಾಗಿದ್ದು, ಸರ್ವೇಯರ್ಗಳು ಆಸ್ತಿ ಸರ್ವೇಗೆ ಬಂದಾಗ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.
ಕೋಲಾರ ನಗರಸಭೆಯಲ್ಲಿ ಮಂಗಳವಾರ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಆಸ್ತಿ ಸರ್ವೇ ಮಾಡಿ ಡಿಜಿಟಲೀಕರಣ ಮಾಡುವುದರಿಂದ ಸಾರ್ವಜನಿಕರ ಆಸ್ತಿ ಭದ್ರಪಡಿಸಿದಂತಾಗುತ್ತದೆ. ಈ ಬಗ್ಗೆ ಜನರಲ್ಲಿ ಇರುವ ಗೊಂದಲ ನಿವಾರಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದರು.
ಯೋಜನೆಯಲ್ಲಿ ನಾಗರಿಕರು ಹೊಂದಿರುವ ಆಸ್ತಿಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಮಾಲೀಕತ್ವದ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಇದರಿಂದ ಆಸ್ತಿಗಳ ದಾಖಲೆಗಳು ತಿರುಚಲು ಸಾಧ್ಯವಿಲ್ಲ ಎಂದರು.
ಸರ್ವೇ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಒಟ್ಟಿಗೆ ಸೇರಿ ನಕ್ಷಾ ಯೋಜನೆಯನ್ನು ಕೋಲಾರದಲ್ಲಿ ಜಾರಿಗೆ ತರಬೇಕು. ಯಾರೂ ಸಹ ಈ ಯೋಜನೆಯಿಂದ ದೂರ ಉಳಿಯುವಂತಾಗಬಾರದು. ಅದಕ್ಕೆ ಅಧಿಕಾರಿಗಳು ಸಹಕರಿಸಬೇಕು. ನಕ್ಷಾ ಯೋಜನೆ ಮೂಲಕ ಕೋಲಾರ ನಗರವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದು ಒಳ್ಳೆಯ ರೂಪ ನೀಡಬೇಕು ಎಂದರು.
ನಕ್ಷಾ ಯೋಜನೆಯನ್ನು ಕೇಂದ್ರ ಸರ್ಕಾರದ ಭೂ ಸಂಪನ್ಮೂಲ ಇಲಾಖೆಯು ಆರಂಭಿಸಿದ್ದು, ಕೇಂದ್ರ ಬಜೆಟ್ನಲ್ಲಿ ನಗರ ಪ್ರದೇಶಗಳಲ್ಲಿ ಭೂ ಸಂಬಂಧಿತ ಸುಧಾರಣೆಗಳು ಮತ್ತು ಕ್ರಮಗಳನ್ನು ಹಣಕಾಸಿನ ಬೆಂಬಲದ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲು ತಿಳಿಸಲಾಗಿದೆ. ಪ್ರಾಯೋಗಿಕವಾಗಿ ದೇಶದ 152 ನಗರ ಪಟ್ಟಣಗಳಲ್ಲಿ ಈ ನಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕೋಲಾರವು ಒಂದಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, ಕೇಂದ್ರ ಸರ್ಕಾರದಿಂದ ನಕ್ಷಾ ಯೋಜನೆಯಲ್ಲಿ ಕೋಲಾರ ನಗರವನ್ನು ಆಯ್ಕೆ ಮಾಡಿಕೊಂಡಿರುವುದು ಜನತೆಗೆ ಸಿಕ್ಕ ಕೊಡುಗೆ. ಇದನ್ನು ಅಧಿಕಾರಿಗಳು ಉತ್ತಮ ರೀತಿ ಜಾರಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸಂಗೀತ ಜಗದೀಶ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ನಗರಸಭೆ ಸದಸ್ಯ ರಾಖೇಶ್ ಇದ್ದರು.