

ಮೀರಠ್: ನಗ್ನವಾಗಿ ಬಂದು ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗುವ ಒಂದು ‘ಬೆತ್ತಲೆ ಗ್ಯಾಂಗ್’ ಭೀತಿ ಹುಟ್ಟಿಸುತ್ತಿರುವ ವಿದ್ಯಮಾನ ಉತ್ತರ ಪ್ರದೇಶದ ಮೀರಠ್ನ ದೌರಾಲಾ ಪ್ರದೇಶದಿಂದ ವರದಿಯಾಗಿದೆ. ಮಹಿಳೆಯರಲ್ಲಿ ಆತಂಕ ಸೃಷ್ಟಿಸಿರುವ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ದುಷ್ಕರ್ವಿುಗಳನ್ನು ಪತ್ತೆ ಹಚ್ಚಲು ಡ್ರೋನ್ ಕಣ್ಗಾವಲನ್ನು ಏರ್ಪಡಿಸಿದ್ದಾರೆ. ಇದುವರೆಗೆ ಈ ರೀತಿಯ ನಾಲ್ಕು ಘಟನೆಗಳು ನಡೆದಿದ್ದು ಸದ್ಯಕ್ಕೆ ಯಾರನ್ನೂ ಬಂಧಿಸಲಾಗಿಲ್ಲ. ಇತ್ತೀಚಿನ ಪ್ರಕರಣವೊಂದರಲ್ಲಿ, ಭರಾಲಾ ಗ್ರಾಮದಲ್ಲಿ ಮಹಿಳೆಯೊಬ್ಬಳು ಏಕಾಂಗಿಯಾಗಿ ಕೆಲಸದ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಪುರುಷರು ಆಕೆಯನ್ನು ಹೊಲಕ್ಕೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದರು. ಗಾಬರಿಯಿಂದ ಕಿರುಚಿಕೊಂಡ ಮಹಿಳೆ, ದುಷ್ಕರ್ವಿುಗಳ ಹಿಡಿತದಿಂದ ತಪ್ಪಿಸಿಕೊಂಡಳು. ಅವಳ ಕೂಗನ್ನು ಕೇಳಿಸಿಕೊಂಡು ದೌಡಾಯಿಸಿ ಬಂದ ಗ್ರಾಮಸ್ಥರು ನಾಲ್ಕೂ ಕಡೆ ಸುತ್ತುವರಿದರೂ ಯಾರೊಬ್ಬರೂ ಪತ್ತೆಯಾಗಲಿಲ್ಲ. ದುಷ್ಕೃತ್ಯ ನಡೆಸಿದವರು ಹೇಗಿದ್ದಾರೆಂದು ಪ್ರಶ್ನಿಸಿದಾಗ, ಅವರು ವಿವಸ್ತ್ರರಾಗಿದ್ದರು ಎಂದು ಆಕೆ ಹೇಳಿದಳು. ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ, ಉದ್ಯೋಗವನ್ನು ಬದಲಿಸಿ ಬೇರೊಂದು ಮಾರ್ಗದಲ್ಲಿ ಹೋಗುತ್ತಿದ್ದಾಳೆ ಎಂದು ಆಕೆಯ ಪತಿ ತಿಳಿಸಿದ್ದಾನೆ.
ಇಂಥ ನಾಲ್ಕು ಪ್ರಕರಣಗಳು ನಡೆದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ಅವಮಾನವಾಗುತ್ತದೆಂದು ಹಿಂದಿನ ಘಟನೆಗಳನ್ನು ವರದಿ ಮಾಡಿರಲಿಲ್ಲ. ಇದೀಗ ಪರಿಸ್ಥಿತಿ ಕೈಮೀರುತ್ತಿರುವುದರಿಂದ ಪೊಲೀಸರಿಗೆ ವಿಷಯ ತಿಳಿಸುವುದು ಅನಿವಾರ್ಯವಾಗಿದೆ ಎಂದು ಗ್ರಾಮದ ಮುಖ್ಯಸ್ಥ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಕಳೆದ ಶನಿವಾರ ಡ್ರೋನ್ಗಳ ನೆರವಿನಿಂದ ಹೊಲಗಳಲ್ಲಿ ಹುಡುಕಾಟ ನಡೆಸಲಾಗಿದೆ. ಸಮೀಪದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗಿದೆ ಎಂದು ಹಿರಿಯ ಎಸ್ಪಿ ವಿಪಿನ್ ತಾಡಾ ತಿಳಿಸಿದ್ದಾರೆ.