

ಬೆಂಗಳೂರು: ಮೊಬೈಲ್ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕಾಲ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಮಹಿಳೆ ಬೆದರಿಕೆ ಒಡ್ಡಿದ್ದು, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಜುಲೈ 20ರ ರಾತ್ರಿ ಬೆಂಗಳೂರಿನ ಯುಬಿ ಸಿಟಿ ಸಮೀಪದಲ್ಲಿ ಇದ್ದಾಗ ಸಿದ್ದೇಶ್ವರ್ ಮೊಬೈಲ್‌ಗೆ ರಾತ್ರಿ 10.16ರಲ್ಲಿ ಅಪರಿಚಿತ ನಂಬರ್‌ನಿಂದ ಅಪರಿಚಿತ ಮಹಿಳೆ ವಾಟ್ಸ್‌ಆ್ಯಪ್‌ನಲ್ಲಿ ಹೇಗಿದ್ದೀರಾ ಎಂದು ಸಂದೇಶ ಕಳುಹಿಸಿದ್ದಾಳೆ. ಇದಕ್ಕೆ ಸಂಸದರು ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ.
ಇದಾದ ಮೇಲೆ ರಾತ್ರಿ 10.22ಕ್ಕೆ ಮತ್ತೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕರೆ ಮಾಡಿ ಹಿಂದಿಯಲ್ಲಿ ಮಾತು ಶುರು ಮಾಡಿದ್ದಳು. ಅದಕ್ಕೆ ನೀನು ಯಾರು ಏಕೆ ಕರೆ ಮಾಡಿದ್ದೀಯ ಎಂದು ಸಂಸದ ಹಿಂದಿಯಲ್ಲೇ ಪ್ರಶ್ನಿಸಿದ್ದಾರೆ. ಆ ಕಡೆಯಿಂದ ಕೂಡಲೇ ಮಹಿಳೆ ಅಸಭ್ಯವಾಗಿ ಮತ್ತು ಅಶ್ಲೀಲವಾಗಿ ಸಂಭಾಷಣೆ ಶುರು ಮಾಡಿದ್ದಾಳೆ. ಕೋಪಗೊಂಡ ಸಂಸದರು, ಕರೆ ಕಟ್ ಮಾಡಿದ್ದಾರೆ.
2 ನಿಮಿಷ ಬಿಟ್ಟು ವಾಟ್ಸ್‌ಆ್ಯಪ್‌ನಲ್ಲಿ ಆಡಿಯೋ ಕರೆ ಮಾಡಿ ಮಹಿಳೆ ಮಾತು ಶುರು ಮಾಡಿದ್ದಾಳೆ. ಆಗಲೂ ಸಂಸದರು ಕಾಲ್ ಕಟ್ ಮಾಡಿ ಸುಮ್ಮನಾಗಿದ್ದಾರೆ. ಮತ್ತೆ ರಾತ್ರಿ 10.27ಕ್ಕೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕಾಳ್ ಮಾಡಿ ಸಂಸದರ ಛಾಯಚಿತ್ರದ ಆಕೆಯ ಮುಖ ಮತ್ತು ಖಾಸಗಿ ಅಂಗಾಂಗ ಪ್ರದರ್ಶನ ಮಾಡಿ ಅಸಭ್ಯವಾಗಿ ಮತ್ತು ಅಶ್ಲೀಲವಾಗಿ ಸಂಭಾಷಣೆ ಶುರು ಮಾಡಿದ್ದಳು.
ಕೂಡಲೇ ಸಂಸದರು ತನ್ನ ಪಕ್ಕದಲ್ಲಿ ಇದ್ದ ಪತ್ನಿಗೆ ಕೊಟ್ಟು ಮಾತನಾಡಲು ಹೇಳಿದ್ದಾರೆ. ಅಷ್ಟೊತ್ತಿಗೆ ಅಪರಿಚಿತ ಮಹಿಳೆ ಕರೆ ಕಟ್ ಮಾಡಿದ್ದಾಳೆ. ಅದೇ ರಾತ್ರಿ 10.47ರಲ್ಲಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ನಿಮ್ಮ ಅಶ್ಲೀಲ ವಿಡಿಯೋವನ್ನು ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಗೂಗಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೆನೆ. ಈ ಕೂಡಲೇ ನನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವಂತೆ ಬೆದರಿಕೆ ಶುರು ಮಾಡಿದ್ದಳು.
ಜುಲೈ 21ರ ಬೆಳಗ್ಗೆ 10 ಗಂಟೆಯಿಂದಲೇ ವಾಟ್ಸ್‌ಆ್ಯಪ್ ಕರೆ ಮತ್ತು ಸಂದೇಶ ಕಳುಹಿಸಿ ಬ್ಲ್ಯಾಕ್‌ಮೇಲ್ ಶುರು ಮಾಡುತ್ತಿದ್ದಳು. ಬೇಸತ್ತ ಸಂಸದರು ತಮ್ಮ ಆಪ್ತ ಐಪಿಎಸ್ ಅಧಿಕಾರಿಗೆ ಮಾಹಿತಿ ಹಂಚಿಕೊಂಡಾಗ ಸೈಬರ್ ವಂಚಕರು ಎಂಬುದನ್ನು ಖಚಿತ ಪಡಿಸಿದ್ದರು.
ಎಚ್ಚೆತ್ತ ಸಂಸದರು, ಐಪಿಎಸ್ ಅಧಿಕಾರಿಯ ಸಲಹೆ ಮೇರೆಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊರರಾಜ್ಯದಿಂದ ಕೃತ್ಯ :
ಸೈಬರ್ ವಂಚಕರ ವಾಟ್ಸ್‌ಆ್ಯಪ್ ಕರೆ ಮತ್ತು ಸಂದೇಶ ಮಾಡಲು ಬಳಸಿರುವ ಸಿಮ್ ಕಾರ್ಡ್ ಕೊಲ್ಕತ್ತಾದಲ್ಲಿ ಆಕ್ಟೀವ್ ಆಗಿದೆ. ರಾಜಸ್ಥಾನದಲ್ಲಿ ಕುಳಿತು ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರ ಜಾಡು ಹಿಡಿದು ವಿಶೇಷ ಪೊಲೀಸ್ ತಂಡ ಆರೋಪಿಗಳ ಬಂಧನಕ್ಕೆ ಬಲೆಬೀಸಿದೆ.
ಏನಿದು ವಿಡಿಯೋ ಕಾಲ್ :
ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕಾಲ್ ಮಾಡಿ ಸೈಬರ್ ಕಳ್ಳರು, ಸಲುಗೆಯಿಂದ ಮಾತು ಶುರು ಮಾಡುತ್ತಾರೆ. ಆನಂತರ ಅಶ್ಲೀಲವಾಗಿ ವರ್ತಿಸಿ ಮತ್ತು ನಗ್ನ ವಿಡಿಯೋ ತೋರಿಸಿ ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಆನಂತರ ನನ್ನ ಜೊತೆಗೆ ಅಶ್ಲೀಲವಾಗಿ ವರ್ತಿಸಿದೀಯ ಎಂದು ಹಣಕ್ಕೆ ಬ್ಲ್ಯಾಕ್‌ಮೇಲ್ ಶುರು ಮಾಡುತ್ತಾರೆ.
ಇಲ್ಲವಾದರೆ, ಸಾಮಾಜಿಕ ಜಾಲತಾಣ ಮತ್ತು ಸಂಬಂಧಿಕರಿಗೆ ವಿಡಿಯೋ ಅಪ್‌ಲೋಡ್ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಒಡ್ಡುತ್ತಾರೆ. ಯಾವುದೇ ಕಾರಣಕ್ಕೂ ಸೈಬರ್ ಖದೀಮರ ಬೆದರಿಕೆಗೆ ಹೆದರದೆ ಸೈಬರ್ ಪೊಲೀಸರಿಗೆ ದೂರು ಕೊಡುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.