ಸಸ್ಪೆಂಡ್ ವಾಪಸಿಲ್ಲವೆಂದ ನಾಯ್ಡು: ಪ್ರತಿಪಕ್ಷಗಳಿಂದ ಜೋರು ಗದ್ದಲ; ಸಂಸತ್ ಕಲಾಪ ದಿನದ ಮಟ್ಟಿಗೆ ಮುಂದೂಡಿಕೆ

Parliament
Published on

ನವದೆಹಲಿ: ವಿಪಕ್ಷಗಳ 12 ಸಂಸದರನ್ನು ರಾಜ್ಯಸಭೆಯಿಂದ ಅಮಾನತು ಗೊಳಿಸಿದ ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂದು ರಾಜ್ಯಸಭೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ. ಇದನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಿಂದ ಹೊರ ನಡೆದದ್ದಲ್ಲದೇ, ಯಾವುದೇ ಕಾರಣಕ್ಕೂ ರಾಜ್ಯಸಭೆಯ ಸಭಾಪತಿ ಬಳಿ ಕ್ಷಮೆ ಕೇಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿವೆ. ಹೀಗಾಗಿ, ಮುಂದಿನ ದಿನಗಳಲ್ಲೂ ಸಂಸದರ ಸಸ್ಪೆಂಡ್ ವಿಚಾರ ಎರಡೂ ಸದನಗಳಲ್ಲಿ ಸದ್ದು, ಗದ್ದಲ ಎಬ್ಬಿಸುವ ಸಾಧ್ಯತೆ ಇದೆ.

ಕಳೆದ ಮುಂಗಾರು ಅಧಿವೇಶನದ ಕೊನೆ ದಿನ ಸಂಸದರು ಯಾವ ರೀತಿ ವರ್ತಿಸಿದರು ಎಂಬುದನ್ನು ದೇಶವೇ ನೋಡಿದೆ. ಈ ಬಗ್ಗೆ ಕನಿಷ್ಠ ಪಶ್ಚಾತ್ತಾಪವೂ ಸಂಸದರಲ್ಲಿಲ್ಲ. ಅವರ ವಿರುದ್ಧ ಕೈಗೊಂಡ ಕ್ರಮ ಸಮರ್ಪಕವಾಗಿ ಎಂದು ವೆಂಕಯ್ಯ ನಾಯ್ಡು ಅಮಾನತು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಿಯೋಗ ಅಮಾನತು ಹಿಂಪಡೆಯುವಂತೆ ಮಾಡಿದ ಮನವಿಯನ್ನು ವೆಂಕಯ್ಯ ನಾಯ್ಡು ತಳ್ಳಿಹಾಕಿದ್ದಾರೆ. ಅಶಿಸ್ತಿನ ವರ್ತನೆಗೆ ಕ್ಷಮೆ ಕೇಳಬೇಕು ಮತ್ತು ಸದನದ ಸುಗಮ ಕಲಾಪಕ್ಕೆ ಅನುವು ಮಾಡಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಸಮಾಧಾನಗೊಳ್ಳದ ಕಾಂಗ್ರೆಸ್ ಮುಖಂಡರು, ಇತರೆ ಸಂಸದರನ್ನು ಸೇರಿಸಿ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಳ್ಳುತ್ತಿರುವ ಟಿಎಂಸಿ, ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರೇರಿತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ ಮತ್ತು ಸದನ ಬಹಿಷ್ಕರಿಸಲೂ ಇಲ್ಲ.

ಇಂದಿನಿಂದ ಧರಣಿ: ಅಮಾನತುಗೊಂಡ ಸಂಸದರು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲು ತೀರ್ವನಿಸಿದ್ದಾರೆ. ಸಭಾಪತಿ ಅಮಾನತು ತೀರ್ಮಾನ ಹಿಂಪಡೆಯುವ ತನಕ ಧರಣಿ ಮುಂದುವರಿಸಲು ನಿರ್ಧರಿಸಲಾಗಿದೆ.

ಐಟಿ, ಟೆಲಿಕಾಂ ಖಾತೆಗಳಲ್ಲಿ ಅಕ್ರಮ: ಐಟಿ ಮತ್ತು ಟೆಲಿಕಾಂ ಸಚಿವಾಲಯಗಳ ವ್ಯಾಪ್ತಿಗೆ ಬರುವ ಘಟಕಗಳ ಖಾತೆಯಲ್ಲಿ ಹಲವು ಹಣಕಾಸಿನ ಲೋಪಗಳು ಕಾಣಿಸಿಕೊಂಡಿವೆ ಎಂದು ಸೋಮವಾರ ಲೋಕಸಭೆಯಲ್ಲಿ ಮಂಡನೆಯಾದ ಸಿಎಜಿ ವರದಿ ಬೆಟ್ಟಮಾಡಿದೆ. ನ್ಯಾಷನಲ್ ಇನ್​ಫೋರ್ವ್ಯಾಟಿಕ್ಸ್ ಸೆಂಟರ್ ಸರ್ವೀಸಸ್ (ಎನ್​ಐಸಿಎಸ್​ಐ) ನಿಯಮ ಮೀರಿ 890 ಕೋಟಿ ರೂ.ಮೌಲ್ಯದ ಹಾರ್ಡ್​ವೇರ್ ಮತ್ತು ಸಾಫ್ಟ್​ವೇರ್ ಖರೀದಿ ಮಾಡಿದ್ದು ಕೂಡ ಇದರಲ್ಲಿ ಸೇರಿಕೊಂಡಿದೆ.

ಪರಿಹಾರಕ್ಕೆ ಮನವಿ: ಅಕೊ್ಟೕಬರ್​ನಿಂದ ಕರ್ನಾಟಕದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವ ಅಸ್ತವ್ಯಸ್ತವಾಗಿದೆ. ಮಳೆ ನೀರು ನುಗ್ಗಿ ಮನೆಗಳು ನಾಶವಾಗಿವೆ. ಪರಿಹಾರ, ಪುನರ್ವಸತಿ ಮತ್ತಿತರ ಕಾರ್ಯಗಳಿಗೆ 2,000 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ರಾಜ್ಯಸಭೆಯ ಬಿಜೆಪಿ ಸಂಸದ ಕೆ.ಸಿ. ರಾಮಮೂರ್ತಿಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಕಾಲಿಕ ಮಳೆಯಿಂದ 9,000ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 7 ಲಕ್ಷ ಹೆಕ್ಟೇರ್​ನಲ್ಲಿ ಬೆಳೆ ನಷ್ಟವಾಗಿದೆ. 2,300 ಕಿ.ಮೀಗೂ ಹೆಚ್ಚು ರಸ್ತೆ ಮಾರ್ಗಗಳು ಹಾನಿಗೊಳಗಾಗಿವೆ ಎಂದರು.

ಸರ್ಕಾರ ವಿಪಕ್ಷಗಳ ದನಿ ಅಡಗಿಸಲು ಯತ್ನಿಸುತ್ತಿದೆ. ನಾವು ಅವರಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ

| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಮುಖಂಡ

ಯಾವ ಕಾರಣಕ್ಕೆ ಕ್ಷಮೆ ಕೇಳಬೇಕು? ಜನರಿಗೆ ಸಂಬಂಧಿಸಿದ ವಿಚಾರವನ್ನು ಸಂಸತ್ತಿನಲ್ಲಿ ಎತ್ತಿದ್ದಕ್ಕೆಯೇ? ಅದು ಸಾಧ್ಯವೇ ಇಲ್ಲ.

| ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ 

ಶೀಘ್ರ ಕ್ರಿಪ್ಟೋಕರೆನ್ಸಿ ಮಸೂದೆ

ಸಚಿವ ಸಂಪುಟದ ಅನುಮೋದನೆ ಸಿಕ್ಕ ಕೂಡಲೇ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕ್ರಿಪ್ಟೋಕರೆನ್ಸಿ ವ್ಯವಹಾರಗಳನ್ನು ಅಪಾಯಕಾರಿ ವ್ಯಕ್ತಿಗಳು ನಿಯಂತ್ರಿಸುವುದಕ್ಕೆ ಕಡಿವಾಣ ಹಾಕುವುದೇ ಕೇಂದ್ರದ ಉದ್ದೇಶ. ಡಿಜಿಟಲ್ ಕರೆನ್ಸಿಗಳ ಕುರಿತ ಜಾಹೀರಾತುಗಳನ್ನು ನಿಲ್ಲಿಸುವ ಯಾವುದೇ ಯೋಜನೆ ಸದ್ಯ ನಮ್ಮ ಮುಂದಿಲ್ಲ. ಈ ವ್ಯವಹಾರವನ್ನು ಕಾನೂನುಬದ್ಧಗೊಳಿಸಬೇಕೋ ಬೇಡವೋ ಎಂಬ ಬಗ್ಗೆ ಕೇಂದ್ರ ಇನ್ನೂ ತೀಮಾನಕ್ಕೆ ಬಂದಿಲ್ಲ. ಕರಡು ಮಸೂದೆ ಬಂದ ಕೂಡಲೇ ಎಲ್ಲಾ ಸಂಶಯ, ಗೊಂದಲಗಳು ನಿವಾರಣೆಯಾಗಲಿವೆ ಎಂದಿದ್ದಾರೆ.

ಸಭಾನಾಯಕರ ಜತೆ ಸ್ಪೀಕರ್ ಚರ್ಚೆ: ವಿರೋಧ ಪಕ್ಷಗಳ ಪ್ರತಿಭಟನೆಯ ಕಾರಣ ಲೋಕಸಭೆಯನ್ನು 2 ಸಾರಿ ಅಲ್ಪಾವಧಿಗೆ ಮುಂದೂಡಲಾಯಿತು. ನಂತರ ಸಮಾವೇಶವಾದಗಲೂ ಗದ್ದಲ ನಿಲ್ಲದ ಕಾರಣ ದಿನ ಮಟ್ಟಿಗೆ ಮುಂದಕ್ಕೆ ಹಾಕಲಾಯಿತು. ಈ ಮಧ್ಯೆ, ಸ್ಪೀಕರ್ ಓಂ ಬಿರ್ಲಾ ಬಿಕ್ಕಟ್ಟು ಪರಿಹರಿಸಲು ವಿವಿಧ ಪಕ್ಷಗಳ ಸಭಾ ನಾಯಕರ ಜತೆ ಸಭೆಯ ನಡೆಸಿದರು. ಅದರೆ, ಅದು ನಿರೀಕ್ಷೆಯ ಫಲನೀಡಿಲಿಲ್ಲ ಎಂದು ಮೂಲಗಳು ತಿಳಿಸಿವೆ.

ಒಬಿಸಿ ಪಟ್ಟಿಯಿಂದ ಅಳಿಸಿ: ಕರ್ನಾಟಕದ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಒಬಿಸಿ ಪಟ್ಟಿಯಿಂದ ತೆಗೆದುಹಾಕಬೇಕು ಎಂಬ ಬೇಡಿಕೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ದಿಂದ ಬಂದಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವೆ ಪ್ರತಿಮಾ ಭೌಮಿಕ್ ಲೋಕಸಭೆಗೆ ತಿಳಿಸಿದರು. ಸಂವಿಧಾನದ ಪ್ರಕಾರ ಕೇಂದ್ರದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿ ಬಗ್ಗೆ ರಾಷ್ಟ್ರಪತಿ ಅಧಿಸೂಚನೆ ಬಳಿಕ ಸಮುದಾಯಗಳನ್ನು ಅಳಿಸುವ ಅಥವಾ ಸೇರಿಸುವ ಅಧಿಕಾರ ಸಂಸತ್ತಿಗೆ ಇದೆ.

ಪೌರತ್ವ ತ್ಯಜಿಸಿದ 6 ಲಕ್ಷ ಭಾರತೀಯರು: ಕಳೆದ ಐದು ವರ್ಷಗಳ ಅವಧಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಭಾರತೀಯರು ಪೌರತ್ವ ತ್ಯಜಿಸಿ ವಿದೇಶಗಳಲ್ಲಿ ಪೌರತ್ವ ಪಡೆದುಕೊಂಡಿದ್ದಾರೆ. 10,645 ಜನ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದು, 4,177 ಜನರಿಗೆ ಪೌರತ್ವ ನೀಡಲಾಗಿದೆ. ಅಮೆರಿಕದಿಂದ 227, ಪಾಕ್ 7,782, ಆಫ್ಘನ್ 795, ಬಾಂಗ್ಲಾದೇಶದಿಂದ 184 ಅರ್ಜಿ ಸಲ್ಲಿಕೆಯಾಗಿದೆ ಎಂದು ಲೋಕಸಭೆಗೆ ಸರ್ಕಾರ ತಿಳಿಸಿದೆ.

ಅಬಕಾರಿ ಸುಂಕ 3.7 ಲಕ್ಷ ಕೋಟಿ ರೂ.: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದ ಮೂಲಕ 2020-21ರಲ್ಲಿ ದುಪಟ್ಟಿಗೂ ಹೆಚ್ಚಾಗಿದ್ದು 3.7 ಲಕ್ಷ ಕೋಟಿ ರೂ.ಸಂಗ್ರಹವಾಗಿದೆ. ಇದರಲ್ಲಿ ರಾಜ್ಯಗಳಿಗೆ ನೀಡಿದ್ದು 20,000 ಕೋಟಿ ರೂ. 2019-20ರಲ್ಲಿ ಇದು 1.78 ಲಕ್ಷ ಕೋಟಿ ರೂ. ಇತ್ತು ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರಿಗೆ 19.98 ರೂ., ಡೀಸೆಲ್​ಗೆ 15.83 ರೂ. 2019ರಲ್ಲಿ ಚಾಲ್ತಿಯಲ್ಲಿತ್ತು.

ಸಂಸತ್​ಗೆ ಸರ್ಕಾರದ ಮಾಹಿತಿ

  • ಜನರಲ್ ಇನ್ಶೂರೆನ್ಸ್ ಕಂಪನಿಗಳನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ.
  • 2ರಿಂದ 18 ವರ್ಷ ಮಕ್ಕಳಿಗಾಗಿ ಕೊವ್ಯಾಕ್ಸಿನ್ ಲಸಿಕೆಗೆ ಮಾಡಿರುವ ಶಿಫಾರಸು ಇನ್ನೂ ಪರಿಶೀಲನೆಯಲ್ಲಿ ಇದೆ.
  • ಈ ವರ್ಷ ಅತಿವೃಷ್ಟಿಯಿಂದ ದೇಶಾದ್ಯಂತ 50.40 ಲಕ್ಷ ಹೆಕ್ಟೇರ್​ನಲ್ಲಿ ಬೆಳೆ ನಾಶವಾಗಿದೆ. ಎಸ್​ಡಿಆರ್​ಎಫ್ ಅಡಿಯಲ್ಲಿ 8,873 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
  • ಪಿಐಬಿಯ ಸುದ್ದಿಗಳ ಸತ್ಯಾಂಶ ಪರಿಶೀಲನೆ ಘಟಕವು 28,378 ಪ್ರಕರಣಗಳನ್ನು ಪರಿಶೀಲಿಸಿದೆ.
  • ಮುದ್ರಾ ಯೋಜನೆಯಡಿ ಕಳೆದ ಅಕ್ಟೋಬರ್ ಅಂತ್ಯದವರೆಗೆ 21.52 ಕೋಟಿ ರೂ. ಸಾಲವನ್ನು ಮಹಿಳಾ ಅರ್ಜಿದಾರರಿಗೆ ವಿತರಿಸಲಾಗಿದೆ.
  • ಪರಿಣಾಮಕಾರಿ ನಿಯಂತ್ರಣ ಕ್ರಮ ಜಾರಿ ಮಾಡಲು ಬಹುರಾಜ್ಯಗಳ ಸಹಕಾರಿ ಸೋಸೈಟಿಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲು ಬಯಸಿದೆ.
  • ಜಮ್ಮು-ಕಾಶ್ಮೀರದಲ್ಲಿ ನ.15ರ ತನಕ 40 ನಾಗರಿಕರು ಉಗ್ರ ದಾಳಿಯಿಂದ ಹತರಾಗಿದ್ದು, ಭದ್ರತಾ ಪಡೆಯ 35 ಸಿಬ್ಬಂದಿ ಹುತಾತ್ಮರಾಗಿದ್ದಾರೆ.
  • ಫೇಮ್ ಇಂಡಿಯಾ ಯೋಜನೆಯ ಎರಡನೇ ಹಂತದಲ್ಲಿ 1.65 ಲಕ್ಷ ವಿದ್ಯುತ್ ವಾಹನಗಳ ಖರೀದಿಗೆ ಬೆಂಬಲ ನೀಡಲಾಗಿದೆ.
  • ಜನ ಔಷಧ ಸುಗಮ್ ಆಪ್ ಅನ್ನು 13.12 ಲಕ್ಷ ಬಳಕೆದಾರರು ದೇಶಾದ್ಯಂತ ಬಳಸುತ್ತಿದ್ದಾರೆ.
  • ಜಿಎಸ್​ಟಿ ಜಾರಿಯಿಂದ ರಾಜ್ಯಗಳಿಗೆ ಆಗಿರುವ ನಷ್ಟ ಸರಿಪಡಿಸುವುದಕ್ಕೆ 5 ವರ್ಷ ತನಕ ಪರಿಹಾರ ಒದಗಿಸುವುದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ.
  • ಸ್ವಾತಂತ್ರ್ಯ ಬಂದಾಗಿನಿಂದ ಎಸ್​ಸಿ ಮತ್ತು ಎಸ್​ಟಿಗಳ ಹೊರತಾಗಿ ಜಾತಿವಾರು ಗಣತಿ ಮಾಡಿಲ್ಲ.
  • ದೇಶಾದ್ಯಂತ ಸದ್ಯ ಎನ್​ಆರ್​ಸಿ ಜಾರಿಯ ಪ್ರಸ್ತಾವ ಸರ್ಕಾರದ ಮುಂದಿಲ್ಲ.
  • ದೇಶಾದ್ಯಂತ ಬ್ಯಾಂಕುಗಳಲ್ಲಿ 9 ಕೋಟಿ ಖಾತೆಗಳು 10 ವರ್ಷದಿಂದ ನಿಷ್ಕ್ರಿಯವಾಗಿದ್ದು ಅವುಗಳಲ್ಲಿ 26,697 ಕೋಟಿ ರೂಪಾಯಿ ಚಲಾವಣೆಯಲ್ಲಿ ಇಲ್ಲದೆ ಉಳಿದಿದೆ.
  • ದೇಶಾದ್ಯಂತ ಒಟ್ಟು 107.46 ಗಿಗಾ ವಾಟ್ ಸಾಮರ್ಥ್ಯದ ಸೌರ ಶಕ್ತಿ ಪ್ರಾಜೆಕ್ಟ್​ಗಳ ಕಾಮಗಾರಿ ಪ್ರಗತಿಯಲ್ಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net