ಬೆಂಗಳೂರು: ಪ್ರಸ್ತುತ ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಗೋಳಿನ ಬಗ್ಗೆ ಹಲವೆಡೆ ಕೇಳುತ್ತಿದ್ದೇವೆ. ಇದೇ ಪರಿಸ್ಥಿತಿಯನ್ನಿಟ್ಟುಕೊಂಡು ಯುವಕನೊಬ್ಬ ಮದುವೆಯಾಗಲು ಎದುರಿಸುವ ಸವಾಲುಗಳ ಸುತ್ತ ಕನ್ನಡದಲ್ಲಿ ಸಿನಿಮಾವೊಂದು ಬರುತ್ತಿದೆ. ಅದುವೇ ‘ನಾಗುಗೆ ವಧು ಬೇಕಾಗಿದೆ’. ಹೊಸ ಪ್ರತಿಭೆ ಆರ್‌ಕೆ ನಿರ್ದೇಶನದ ಚಿತ್ರವಾಗಿದ್ದು, ದತ್ತು ಪೂಜಾರಿ, ಸೋನಿಕಾ ಸೋಮಣ್ಣ, ಚಿತ್ರಾಲ್ ರಂಗಸ್ವಾಮಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಬಿಡುಗಡೆಯ ಹಾದಿಯಲ್ಲಿದೆ. ಅಂದುಕೊಂಡಂತಾದರೆ, ಮುಂದಿನ ತಿಂಗಳು ಸಿನಿಮಾ ತೆರೆ ಮೇಲೆ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ಧ್ವನಿ ಸುರುಳಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ‘ನಗರ ಅಥವಾ ಹಳ್ಳಿಗಳಾಗಲಿ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಮಾತನ್ನು ಕೇಳಿರುತ್ತವೆ. ಹುಡುಗಿಯನ್ನು ಮದುವೆ ಮಾಡಿಕೊಡಲು ಹಲವು ಬೇಡಿಕೆಗಳನ್ನು ಇಡುತ್ತಿರುವುದು ತಿಳಿದಿದೆ. ಇದೇ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಇದೊಂದು ನೈಜ ಘಟನಾಧಾರಿತ ಚಿತ್ರವಾಗಿದೆ’ ಎಂದು ನಿರ್ದೇಶಕ ಆರ್‌ಕೆ ಮಾಹಿತಿ ನೀಡಿದರು. ದತ್ತು, ಸೋನಿಕಾ ಜತೆಗೆ ಅಪೂರ್ವಶ್ರೀ, ರೇಖಾದಾಸ್, ಜಯರಾಮ್ ಕಲಾಬಳಗದಲ್ಲಿದ್ದಾರೆ. ಸುರೇಶ್ ಸಂಗೀತ, ನಾಗರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.