Nagpur Violence | ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಗಲಭೆಕೋರರಿಂದ ಲೈಂಗಿಕ ದೌರ್ಜನ್ಯ; ಎಫ್​ಐಆರ್​ನಲ್ಲಿರುವ ಮಾಹಿತಿ ಬಹಿರಂಗ

Untitled design (15)
Published on

ಮುಂಬೈ: ನಾಗ್ಪುರ ಹಿಂಸಾಚಾರದ(Nagpur Violence) ನಂತರ ಮಹಾರಾಷ್ಟ್ರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಕರಣದ ಎಫ್‌ಐಆರ್ ಪ್ರತಿಯೊಂದು ಬಹಿರಂಗಗೊಂಡಿದೆ. ಅದರಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಈ ಘಟನೆಯ ಬಗ್ಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದಾರೆ. ಇತರ ಮಹಿಳಾ ಪೊಲೀಸ್ ಸಿಬ್ಬಂದಿಯ ಜತೆಯೂ ಕೆಟ್ಟದಾಗಿ ವರ್ತಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮಹಿಳಾ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ರಾತ್ರಿಯ ಕತ್ತಲೆಯ ಲಾಭ ಪಡೆದುಕೊಂಡ ಗುಂಪು ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ದೌರ್ಜನ್ಯ ನಡೆಸಲು ಪ್ರಯತ್ನಿಸಿದೆ. ಕೆಲವು ದುಷ್ಕರ್ಮಿಗಳು ಸಂತ್ರಸ್ತೆ ಮಹಿಳಾ ಪೊಲೀಸ್ ಸಿಬ್ಬಂದಿಯ ಸಮವಸ್ತ್ರವನ್ನು ಎಳೆಯಲು ಪ್ರಯತ್ನಿಸಿ, ಅವರ ದೇಹವನ್ನು ಮುಟ್ಟಲು ಪ್ರಯತ್ನಿಸಿದ್ದಾರೆ. ಇತರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಶ್ಲೀಲ ಸನ್ನೆಗಳು ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ಎಫ್​​​ಐಆರ್​ನಲ್ಲಿ ಉಲ್ಲೇಖಿಸಿಲಾಗಿದೆ.

ಮಹಿಳಾ ಪೊಲೀಸ್ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳದ ದೂರು ನೀಡಿದ್ದು, ನಂತರ ನಾಗ್ಪುರದ ಗಣೇಶ್ ಪೇಟ್ ಪೊಲೀಸ್ ಠಾಣೆಯಲ್ಲಿ ಗುಂಪಿನ ವಿರುದ್ಧ ಪ್ರಕರಣ ದಾಖಲಾಗಿದೆ. ಅದೇ ಗುಂಪು ಸ್ಥಳದಲ್ಲಿದ್ದ ಇತರ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೂ ಅನುಚಿತವಾಗಿ ವರ್ತಿಸಿದೆ ಎಂದು ದೂರಿನಲ್ಲಿ ಬಹಿರಂಗವಾಗಿದೆ.

ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 50 ಜನರನ್ನು ಬಂಧಿಸಲಾಗಿದೆ. 10 ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಡಿಸಿಪಿ ರಾಹುಲ್ ಮಕ್ನಿಕರ್ ತಿಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಮ್, ಮಹಿಳಾ ಪೊಲೀಸ್ ಉದ್ಯೋಗಿಯೊಬ್ಬರು ಕಿರುಕುಳಕ್ಕೊಳಗಾಗಿದ್ದರೆ, ಅದನ್ನು ಮಾಡಿದ ವ್ಯಕ್ತಿಯನ್ನು ಬಿಡಲಾಗುವುದಿಲ್ಲ ಎಂದು ಹೇಳಿದರು. ಏನಾಗುತ್ತದೆ ಎಂಬುದನ್ನು ನಾವು ತೋರಿಸುತ್ತೇವೆ ಎಂದು ಸಿಎಂ ಕೂಡ ಹೇಳಿದ್ದಾರೆ.

ಮೂಲಗಳ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ವದಂತಿಯ ಬಗ್ಗೆ ನಾಗ್ಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಮಂಗಳವಾರ ರಾತ್ರಿ ನಾಗ್ಪುರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಧ್ವಜ ಮೆರವಣಿಗೆ ನಡೆಸಲಾಯಿತು. ನಾಗ್ಪುರ ಪೊಲೀಸರು ಪ್ರದೇಶಗಳ ಪರಿಶೀಲನೆ ನಡೆಸುತ್ತಿದ್ದಾರೆ. ವಾತಾವರಣ ಈಗ ಸಂಪೂರ್ಣವಾಗಿ ಶಾಂತವಾಗಿದೆ. ಕರ್ಫ್ಯೂ ತೆಗೆದುಹಾಕುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು ಎನ್ನಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net