ಉದಯವಾದಳು ಚೆಲುವ ಕನ್ನಡದೇವಿ: ನಾಡದೇವಿ ಭಾವಚಿತ್ರ ಅಂತಿಮ; ತಜ್ಞರ ಸಮಿತಿ ಶಿಫಾರಸು ಅಂಗೀಕಾರ

Kannada
Published on

ಬೆಂಗಳೂರು: ನಾಡಗೀತೆ ಅವಧಿ, ರಾಗಸಂಯೋಜನೆ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು ವಿವಾದ ಬಗೆಹರಿಸಿದ್ದ ಸರ್ಕಾರ, ಇದೀಗ ನಾಡದೇವಿ ಭಾವಚಿತ್ರಕ್ಕೂ ನಿರ್ದಿಷ್ಟ ರೂಪ ಹಾಗೂ ಸ್ಪಷ್ಟತೆಯ ಅಂತಿಮ ಮುದ್ರೆಯೊತ್ತಿದೆ. ಸರ್ಕಾರವೇ ರಚಿಸಿದ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ಶಿಫಾರಸು ಮಾಡಿದ ನಾಡದೇವತೆ ಚಿತ್ರಕೃತಿಯನ್ನು ಅಂಗೀಕರಿಸಿದೆ. ಸರ್ಕಾರದ ಪರಿಕಲ್ಪನೆ, ಸಮಿತಿ ಸೂಚನೆಯಂತೆ ಬೆಂಗಳೂರಿನ ಕಲಾವಿದ ಕೆ. ಸೋಮಶೇಖರ್ ಈ ಚಿತ್ರ ಸಿದ್ಧಪಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸ್ತು ಎಂದ ಬಳಿಕ ನಾಡದೇವಿಯ ಅಧಿಕೃತ ಹಾಗೂ ಪ್ರಮಾಣಿತ ಭಾವಚಿತ್ರವಾಗಲಿದೆ.

ನಾಡಿನ ಬಿಂಬ: ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು, ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಈ ಚಿತ್ರಕೃತಿ ಬಿಂಬಿಸುತ್ತದೆ. ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ ಕರ್ಣಪರ್ಯಗಳು, ಕರ್ನಾಟಕದ ಲಾಂಛನ- ಗಂಡಭೇರುಂಡ ಪದಕ, ಉದ್ದನೆಯ ವೈಜಯಂತಿ ಹಾರ, ಹೊಯ್ಸಳ ಲಾಂಛನ ಪದಕ, ಹೂವಿನ ತೋಮಾಲೆ ಸೇರಿ ಸಮಗ್ರ ಕರ್ನಾಟಕ ಮಿಳಿತವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್​ಕುಮಾರ್ ಮಾಹಿತಿ ನೀಡಿದರು.

ಚಿತ್ರದ ವೈಶಿಷ್ಟ್ಯ

  • ನಾಡದೇವತೆ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ
  • ಮುಖದಲ್ಲಿ ಸ್ವಾಭಾವಿಕ ಸೌಂದರ್ಯ, ದೈವಿ ಭಾವ
  • ದ್ವಿಭುಜ ಅಂದರೆ ಎರಡು ಕೈಗಳು ವಾಸ್ತವಿಕತೆಗೆ ಹತ್ತಿರ
  • ಬಲಗೈಯಲ್ಲಿ ಅಭಯ ಮುದ್ರೆ, ಎಡಗೈಯಲ್ಲಿ ತಾಳೆಗರಿ
  • ಕುಳಿತಿರುವ ಭಂಗಿ ಭವ್ಯತೆ, ಸಾಕ್ಷ್ಯತೆಯ ಪ್ರತಿಬಿಂಬ
  • ಕನ್ನಡಾಭಿಮಾನದ ಸಂಕೇತ ಕರ್ನಾಟಕದ ಧ್ವಜ
  • ಸಿರಿಸಂಪದ ಸಮೃದ್ಧಿ ಸೂಚಿಸುವ ಇಳಕಲ್ ಹಸಿರು ಸೀರೆ
  • ನಾಡನ್ನು ಆಡಳಿದ ಸಾಮ್ರಾಜ್ಯಗಳ ವೈಭವ ಸಾರುವ ಆಭರಣ
  • ಚಾಲುಕ್ಯರ ಕಾಲದ ಕಿರೀಟ, ಕಾಲುಗಳಿಗೆ ತಾವರೆ ಹೂವು ಆಸರೆ
  • ಹಿನ್ನೆಲೆಯಲ್ಲಿ ಪಶ್ಚಿಮಘಟ್ಟ ಸಸ್ಯಕಾಶಿಯ ಸೊಬಗು

ಎಲ್ಲೆಡೆ ಕಡ್ಡಾಯ: ಬೆಂಗಳೂರು ಕಲಾಗ್ರಾಮದಲ್ಲಿ ಇದೇ ಚಿತ್ರಕೃತಿಯ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು. ಅಧಿಕೃತ ಭಾವಚಿತ್ರವೇ ಎಲ್ಲ ಸರ್ಕಾರಿ ಕಚೇರಿಗಳು, ಕಾರ್ಯಕ್ರಮಗಳು ಹಾಗೂ ಕನ್ನಡಪರ ಚಟುವಟಿಕೆಗಳು ಸೇರಿ ಎಲ್ಲೆಡೆ ಬಳಕೆ ಕಡ್ಡಾಯವಾಗಲಿದೆ ಎಂದು ಸುನಿಲ್​ಕುಮಾರ್ ತಿಳಿಸಿದರು.

ತಜ್ಞರ ಸಮಿತಿ ಶಿಫಾರಸು ಮಾಡಿದ ಚಿತ್ರಕೃತಿ ಅಂಗೀಕರಿಸಿದ್ದು, ಮುಖ್ಯಮಂತ್ರಿ ಒಪ್ಪಿಗೆ ನೀಡಿದ ಬಳಿಕ ನಾಡದೇವಿಯ ಪ್ರಮಾಣಿತ ಹಾಗೂ ಅಧಿಕೃತ ಭಾವಚಿತ್ರವಾಗಿ ಎಲ್ಲೆಡೆ ಬಳಕೆಯಾಗಲಿದೆ. | ವಿ.ಸುನಿಲ್​ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವ ಮುಖದಲ್ಲಿ ತೇಜೋಲಕ್ಷಣವುಳ್ಳ, ಕನ್ನಡದ ಆಶಯ, ಅಸ್ಮಿತೆ ಯೊಂದಿಗೆ ರೂಪುಗೊಂಡ ಚಿತ್ರವನ್ನು ಅಧಿಕೃತಗೊಳಿಸಬೇಕು ಎಂಬ ಶಿಫಾರಸು ಪುರಸ್ಕೃತವಾಗಿ ರುವುದು ಸಂತಸ ತಂದಿದೆ. | ಡಿ.ಮಹೇಂದ್ರ ತಜ್ಞರ ಸಮಿತಿ ಅಧ್ಯಕ್ಷ

ನಿರ್ದಿಷ್ಟ ಚಿತ್ರವಿಲ್ಲ: ಸಾ.ಶಿ. ಮರುಳಯ್ಯ ಕಸಾಪ ಅಧ್ಯಕ್ಷರಾಗಿದ್ದಾಗ ಬಿ.ಕೆ.ಎಸ್. ವರ್ವ ಸೃಜಿಸಿದ ‘ಕರ್ನಾಟಕ ಮಾತೆ’ ಹಾಗೂ ಉತ್ತರ ಕರ್ನಾಟಕದ ಕಲಾವಿದರು ರಚಿಸಿದ ಭಾವಚಿತ್ರವೂ ಹಲವೆಡೆ ಬಳಕೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net