

ಸಾಗರ: ಹಿರಿಯ ಸಾಹಿತಿ ನಾ. ಡಿಸೋಜ ಕುರಿತು ಸಾಕ್ಷೃಚಿತ್ರ ಹೊರತಂದಿರುವುದು ತುಂಬ ಒಳ್ಳೆಯ ಸಂಗತಿ. ಅವರು ನಮ್ಮೂರಿನ ಹೆಮ್ಮೆಯ ಸಾಹಿತಿ. ಅವರ ಬದುಕು ಮತ್ತು ಬರಹ ಯುವಜನರಿಗೆ ಪ್ರೇರಣೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಶನಿವಾರ ಅನಿಮಿಷ ತಂಡದಿಂದ ಏಸುಪ್ರಕಾಶ್ ಮತ್ತು ವಿಲಿಯಂ ಅವರ ನೆನಪಿನಲ್ಲಿ ಸಾಹಿತಿ ಡಾ. ನಾ.ಡಿಸೋಜ ಕುರಿತ ‘ನಾಡಿ ಬದುಕು-ಬರಹ’ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ನಾ.ಡಿಸೋಜ ನೀಡಿರುವ ಕೊಡುಗೆ ಅಪಾರ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಅವರ ಕೃತಿಗಳು ಚಲನಚಿತ್ರವಾಗಿ ನಿರ್ಮಾಣಗೊಂಡು ರಾಷ್ಟ್ರಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ. ಅವರ ಬದುಕು ಮತ್ತು ಬರಹವನ್ನು ಕುರಿತು ನಿರ್ಮಿಸಿರುವ ಈ ಸಾಕ್ಷ್ಯಚಿತ್ರವನ್ನು ಎಲ್ಲರೂ ವೀಕ್ಷಿಸಬೇಕು ಎಂದರು.
ಸಾಹಿತಿ ವಿಲಿಯಂ ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಚಿತ್ರನಟ ಏಸುಪ್ರಕಾಶ್ ಸಿನಿಮಾ, ಪರಿಸರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಗಮನಾರ್ಹ. ಅವರ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಅಭಿಮಾನಿಗಳು ಆಚರಿಸುವ ಮೂಲಕ ಸ್ಮರಿಸುತ್ತಿರುವುದು ಅನುಕರಣೀಯ ಎಂದು ಹೇಳಿದರು.
ನಾ. ಡಿಸೋಜ ಅವರ ಒಡನಾಡಿಗಳಾದ ವೈ.ಎ.ದಂತಿ, ವಿಜಯವಾಮನ್, ಸಾಹಿತಿ ಡಾ. ಜಿ.ಎಸ್.ಭಟ್, ಕಲಾವಿದ ಅರುಣಕುಮಾರ್, ರಂಗಕರ್ಮಿ ಪುರುಷೋತ್ತಮ ತಲವಾಟ ಇತರರು ಮಾತನಾಡಿದರು. ನವೀನ್ ಡಿಸೋಜ, ಸಂತೋಷ್ ವಸಿಷ್ಠ, ಪ್ರದೀಪ್, ನಾಗರಾಜ್, ನಿರಂಜನ್, ಪದ್ಮಶ್ರೀ, ಶೈಲಜಾ, ಧನುಷ್‌ಕುಮಾರ್ ಇತರರಿದ್ದರು.