ಮೈಶುಗರ್ ಕಾರ್ಖಾನೆ ಆಧುನೀಕರಣದಿಂದ ಶಾಶ್ವತ ಪರಿಹಾರ: ಸಚಿವ ಚಲುವರಾಯಸ್ವಾಮಿ | Integrated Agri varsity sanctioned to Mandya

Mandya dist delegation
Published on

ಬೆಂಗಳೂರು: ಮಂಡ್ಯ ಜಿಲ್ಲೆಯ ದಶಕದ ಸಮಗ್ರ ಕೃಷಿ ವಿಶ್ವ ವಿದ್ಯಾಲಯದ ಕನಸು ನನಸು ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಸತ್ಕರಿಸಿ, ದನ್ಯವಾದ ತಿಳಿಸುತ್ತಾ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೊಸದೊಂದು ಬೇಡಿಕೆಯಿಟ್ಟರು !.

ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ಗೆ ಶಾಲು ಹೊದಿಸಿ, ಲ-ಪುಷ್ಪ, ಕಬ್ಬು, ಸಕ್ಕರೆ, ಒಣಹಣ್ಣುಗಳಿದ್ದ ಬ್ಯಾಗ್ ನೀಡಿ ಸನ್ಮಾನಿಸಿ ಗೌರವಿಸಿ ಮಂಡ್ಯ ಜಿಲ್ಲೆಯ ಜನರ ಬೇಡಿಕೆ ಈಡೇರಿಸಿದ್ದಕ್ಕಾಗಿ ಆಭಾರ ಮನ್ನಣೆ ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿದ ಸಿಎಂ, ಡಿಸಿಎಂ ನಿಯೋಗಕ್ಕೆ ಧನವ್ಯಾದ ತಿಳಿಸಿದರು.

ಶಾಶ್ವತ ಪರಿಹಾರದ ಪ್ರಸ್ತಾಪ

ಸತ್ಕಾರಕ್ಕೆ ಮುನ್ನ ನಿಯೋಗದ ನೇತೃತ್ವವಹಿಸಿದ್ದ ಕೃಷಿ ಖಾತೆ ಹೊಂದಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಧನ್ಯವಾದ ಸಲ್ಲಿಸಲು ಬಂದ ಕಾರಣವನ್ನು ತಿಳಿಸಿ ಶಾಶ್ವತ ಪರಿಹಾರದ ಬೇಡಿಕೆಯನ್ನು ಪ್ರಸ್ತಾಪಿಸಿದರು.

ಸರ್ಕಾರಿ ಸ್ವಾಮ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೀಡಿದ್ದ ಭರವಸೆಯನ್ನು ಸಿಎಂ, ಡಿಸಿಎಂ ಆದ 15 ದಿನಗಳಲ್ಲೇ ಈಡೇರಿಸಿದ್ದಾರೆ.

ಕಾರ್ಖಾನೆ ಪುನಶ್ಚೇತನಕ್ಕೆ 10 ಕೋಟಿ ರೂ. ಕೇಳಿದರೆ, ಅಷ್ಟು ಸಾಕಾಗುವುದಿಲ್ಲ ಎಂದ ಸಿದ್ದರಾಮಯ್ಯ 50 ಕೋಟಿ ರೂ. ಬಿಡುಗಡೆ ಮಾಡಿದರು. ಇದರಿಂದಾಗಿ ಕಾರ್ಖಾನೆಯು ಎರಡು ಲಕ್ಷ ಟನ್ ಕಬ್ಬು ಅರೆಯಲು, ಕಬ್ಬು ಬೆಳೆಗಾರರ ಎಲ್ಲ ಬಾಕಿ ಪಾವತಿ ಸಾಧ್ಯವಾಗಿದೆ.

ಪ್ರಸಕ್ತ ವರ್ಷವೂ ಎರಡು ಲಕ್ಷ ಟನ್ ಕಬ್ಬು ಅರೆಯಲಾಗುತ್ತದೆ. ಕಾರ್ಖಾನೆಯ ಯಂತ್ರೋಪಕರಣ ಬಹಳ ಹಳೆಯದಾಗಿದೆ. ಪ್ರತಿದಿನ ಐದು ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯದ ಹೊಸ ಯಂತ್ರೋಪರಣ ಅಳವಡಿಸಿದರೆ ಕಾರ್ಖಾನೆಗೆ ಶಾಶ್ವತ ಪರಿಹಾರ ಲಭಿಸಲಿದೆ.

ಕಾರ್ಖಾನೆಗೆ ಮತ್ತಿನ್ಯಾವುದಕ್ಕೂ ಸರ್ಕಾರದ ನೆರವು ಕೇಳುವುದಿಲ್ಲ. ಅಷ್ಟೇ ಅಲ್ಲ, ವಿದ್ಯುತ್ ಬಿಲ್ ಬಾಕಿ 52 ಕೋಟಿ ರೂ. ಮನ್ನಾ ಮಾಡಲಾಗಿದೆ. ಕಡಿತವಾಗಿದ್ದ ಒಂಭತ್ತು ಕೋಟಿ ರೂ. ಆದಾಯ ತೆರಿಗೆ ಮರಳಿ ಕಾರ್ಖಾನೆ ಖಾತೆಗೆ ಜಮೆಯಾಗಿದ್ದಕ್ಕೆ ರೈತರಿಗೆ ಸಂತಸವಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

ಕನಸು ನನಸು

ಕೃಷಿ-ತೋಟಗಾರಿಕೆ ಒಳಗೊಂಡು ಸಮಗ್ರ ವಿವಿ ಸ್ಥಾಪಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಮೈಸೂರು ಕಂದಾಯ ವಿಭಾಗ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಸ್ಥಾಪನೆಯಾಗಬೇಕು ಎಂಬ ಬಹು ದಿನದ ಕನಸು ನನಸು ಮಾಡಲಾಗಿದೆ.

ಸಕ್ಕರೆ ನಾಡು, ಕೃಷಿಕರ ಬೀಡು ಹಾಗೂ ಶ್ರೀಮಂತ ಸಾಂಸ್ಕೃತಿಕ ನೆಲೆಯಾಗಿರುವ ಮಂಡ್ಯ ಜಿಲ್ಲೆಯ ಜನರು ಹರ್ಷಭರಿತರಾಗಿದ್ದಾರೆ ಎಂದು ಚಲುವರಾಯಸ್ವಾಮಿ ಜಿಲ್ಲೆಯ ಜನರ ಭಾವನೆಯನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಶಾಸಕರಾದ ನರೇಂದ್ರಸ್ವಾಮಿ, ದಿನೇಶ್ ಗೂಳಿಗೌಡ, ರಮೇಶ್ ಬಂಡಿಸಿದ್ಧೆಗೌಡ, ದರ್ಶನ್ ಪುಟ್ಟಣ್ಣಯ್ಯ, ಮಧು ಮಾದೇಗೌಡ, ಮೈಶುಗರ್ ಅಧ್ಯಕ್ಷ ಗಂಗಾಧರ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮಾಜಿ ಶಾಸಕರು, ಮತ್ತಿತರ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net