

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಎರಡು ತಿಂಗಳ ಬಳಿಕವೂ ತನಿಖೆಯಲ್ಲಿ ಅಚ್ಚರಿಯ ಸಂಗತಿಗಳು ಹೊರ ಬೀಳುತ್ತಲೇ ಇವೆ.
ಬಾಂದ್ರಾದಲ್ಲಿರುವ ಮನೆಯಲ್ಲಿ ಜೂನ್ 14ರಂದು ಸುಶಾಂತ್ ಸಿಂಗ್ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದು ಮಹಜರು ಅಥವಾ ಪಂಚನಾಮೆ ನಡೆಸಿದ್ದ ಪೊಲೀಸರ ವರದಿಯಲ್ಲಿ ಆಶ್ಚರ್ಯಕರ ಸಂಗತಿಯೊಂದು ಬಯಲಾಗಿದೆ.
ಸುಶಾಂತ್ ಸಿಂಗ್ ಬೆಡ್ರೂಮ್ನಲ್ಲಿ ಮಂಚದ ಮೇಲಿದ್ದ ಹಾಸಿಗೆಯಿಂದ ಫ್ಯಾನ್ವರೆಗಿನ ಎತ್ತರ 5 ಅಡಿ 11 ಅಂಗುಲ ಇದೆ. ಆದರೆ, ಸುಶಾಂತ್ ಎತ್ತರ 5 ಅಡಿ 10 ಅಂಗುಲ ಇರುವುದು ಗೊತ್ತಾಗಿದೆ. ಹೀಗಿರುವಾಗ ಅಷ್ಟು ಎತ್ತರದ ವ್ಯಕ್ತಿ ಫ್ಯಾನಿನಿಂದ ನೇತಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.
ಈ ಪ್ರಶ್ನೆಯೇ ಸುಶಾಂತ್ ಸಿಂಗ್ ರಜಪೂತ್ನದ್ದು ಆತ್ಮಹತ್ಯೆ ಎಂಬ ವಾದವನ್ನೇ ಪೊಳ್ಳು ಮಾಡುತ್ತದೆ. ಇದಲ್ಲದೇ, ಆತ್ಮಹತ್ಯೆಗೆ ಸ್ನಾನಗೃಹದ ನಿಲುವಂಗಿಯ ಬೆಲ್ಟ್ ಬಳಸಿದ್ದ. ಅದು ತುಂಡಾಗಿತ್ತು. ಹಾಸಿಗೆ ಮೇಲೆಯೇ ಬಿದ್ದಿತ್ತು ಎಂಬುದು ಕೂಡ ಪೊಲೀಸ್ ವರದಿಯಲ್ಲಿಯೇ ಇದೆ.
ಕೊನೆಗೆ ಹಸಿರುಕುರ್ತಾ ಬಳಸಿಕೊಂಡು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಹೇಳಿದ್ದರು. ಜತೆಗೆ ಫೊರೆನ್ಸಿಕ್ ತನಿಖೆಯಲ್ಲೂ ಇದು ಖಚಿತವಾಗಿದೆ ಎಂದು ವರದಿ ನೀಡಿದ್ದರು. ತನಿಖೆ ಮುಂದುವರಿದಂತೆ ಹೊಸ ಹೊಸ ಸಂಗತಿಗಳ ಬಯಲಾಗುತ್ತಿರುವುದು ಪ್ರಕರಣವನ್ನು ಇನ್ನಷ್ಟು ಕಗ್ಗಂಟಾಗಿಸುತ್ತಿದೆ.