ಭಾರತದಲ್ಲಿ ಬಿಜೆಪಿ, ಆರ್​ಎಸ್​ಎಸ್​ ನಿಯಂತ್ರಣದಲ್ಲಿದೆಯೇ ಫೇಸ್​ಬುಕ್..? ಕೆಸರೆರಚಾಟಕ್ಕೆ ಕಾರಣವೇನು?

facebook
Published on

ನವದೆಹಲಿ: ಭಾರತದಲ್ಲಿ ಬಿಜೆಪಿ ಹಾಗೂ ಆರ್​ಎಸ್​ಎಸ್​ ಸಂಘಟನೆಗಳು ಫೇಸ್​ಬುಕ್​ ನಿಯಂತ್ರಿಸುತ್ತಿವೆ ಎಂಬ ವಾದವೀಗ ಭಾರಿ ಚರ್ಚೆಯಲ್ಲಿದೆ ಹಾಗೂ ಬಿಜೆಪಿ- ಕಾಂಗ್ರೆಸ್​ ನಾಯಕರ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಮೆರಿಕದ ಮಾಧ್ಯಮವೊಂದರ ವರದಿಯನ್ನು ಪ್ರಸ್ತಾಪಿಸಿ, ಭಾರತದಲ್ಲಿ ದ್ವೇಷಕಾರುವ ಹೇಳಿಕೆಗಳ ನಿಯಮವನ್ನು ಬಿಜೆಪಿ ನಾಯಕರ ವಿರುದ್ಧ ಜಾರಿಗೊಳಿಸಲು ಫೇಸ್​ಬುಕ್​ ಹಿಂಜರಿಯುತ್ತಿದೆ. ಫೇಸ್​ಬುಕ್​ ಹಾಗೂ ವಾಟ್ಸ್ಯಾಪ್​ ನಿಯಂತ್ರಿಸುವ ಬಿಜೆಪಿ ಹಾಗೂ ಆರ್​ಎಸ್​ಎಸ್​ ಸುಳ್ಳುಸುದ್ದಿ ಮತ್ತು ದ್ವೇಷಭಾವವನ್ನು ಬಿತ್ತುತ್ತಿವೆ. ಆ ಮೂಲಕ ಮತದಾನ ವ್ಯವಸ್ತೆ ಮೇಲೆ ಪ್ರಭಾವ ಬೀರುತ್ತಿವೆ. ಇದನ್ನು ಅಮೆರಿಕ ಮಾಧ್ಯಮ ಬಯಲು ಮಾಡಿದೆ ಎಂದು ಆರೋಪಿಸಿದ್ದರು.

ಕಾಂಗ್ರೆಸ್​ ನಾಯಕ ಶಶಿ ತರೂರ್​ ಕೂಡ ಈ ಬಗ್ಗೆ ಪ್ರತಿಕ್ರಿಯಸಿದ್ದಾರೆ. ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್​ ಕೂಡ ಇದೊಂದು ಆಘಾತಕಾರಿ ಸಂಗತಿ ಎಂದೇ ಹೇಳಿದ್ದಾರೆ.

ಕಾಂಗ್ರೆಸ್​ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ರವಿಶಂಕರ್​ ಪ್ರಸಾದ್​, ಕೈಲಾಗದವರಿಗೆ ತಮ್ಮ ಪಕ್ಷದಲ್ಲಿರುವ ಜನರ ಮೇಲೆಯೇ ಪ್ರಭಾವ ಬೀರಲು ಸಾಧ್ಯವಾಗುತ್ತಿಲ್ಲ. ಆದರೆ, ಇಡೀ ಜಗತನ್ನು ಆರ್​ಎಸ್​ಎಸ್​ ಹಾಗೂ ಬಿಜೆಪಿ ನಿಯಂತ್ರಿಸುತ್ತಿದೆ ಎಂದುಕೊಳ್ಳುತ್ತಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಚುನಾವಣೆಗೂ ಮುನ್ನ ಕೇಂಬ್ರಿಡ್ಜ್​ ಅನಾಲಿಟಿಕಾ ಹಾಗೂ ಫೇಸ್​ಬುಕ್​ನ ಮಾಹಿತಿ ಸಂಗ್ರಹಿಸಿ ಸಿಕ್ಕಿ ಬಿದ್ದಿದೀರಿ. ಈಗ ನಮ್ಮನ್ನು ಪ್ರಶ್ನಿಸುತ್ತಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.

ಅಮೆರಿಕದ ವಾಲ್​ಸ್ಟ್ರಿಟ್​ ಜರ್ನಲ್​ನಲ್ಲಿ 'Facebook Hate-Speech Rules Collide With Indian Politics ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net