ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ ಉದ್ಘಾಟನೆ

cd8a4c4d-4714-4cc5-a88c-02082c5a879e
Published on

ತಿ.ನರಸೀಪುರ: ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ಗ್ರಾಮಸ್ಥರು ಜೀರ್ಣೋದ್ಧಾರಗೊಳಿಸಿರುವ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠವನ್ನು ಭಾನುವಾರ ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಅಧ್ಯಕ್ಷ ಶ್ರೀ ಮಹಂತಸ್ವಾಮೀಜಿ ಉದ್ಘಾಟಿಸಿದರು.


ಮಠದ ಉದ್ಘಾಟನೆ ಹಿನ್ನೆಲೆಯಲ್ಲಿ ಗ್ರಾಮವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ಪ್ರತಿ ಮನೆ ಮುಂದೆ ರಂಗೋಲಿ ಬಿಡಿಸಿ ಬೀದಿಯನ್ನು ಅಲಂಕರಿಸಿದ್ದರು.


ಲಿಂಗೈಕ್ಯ ಶ್ರೀ ಬಸಪ್ಪದೇವರು ಸ್ವಾಮೀಜಿ ಅವರ ಗದ್ದಿಗೆಗೆ ಪೂಜೆ ಸಲ್ಲಿಸಲಾಯಿತು. ವಿವಿಧ ಮಠಾಧೀಶರ ಸಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯ ಹಾಗೂ ಶ್ರೀ ಮಹಂತ ಸ್ವಾಮೀಜಿ ಅವರ ಪಾದಪೂಜೆ ನೆರವೇರಿಸಲಾಯಿತು.


ಕುಂತೂರು ಮಠದ ಶ್ರೀ ಶಿವಪ್ರಭುಸ್ವಾಮೀಜಿ, ಚಿಕ್ಕಿಂದುವಾಡಿ ಮಠದ ಬಾಲಷಡಕ್ಷರಿ ಸ್ವಾಮೀಜಿ, ಬಿ.ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಹಿರಿಯೂರು ಮಠದ ಶ್ರೀ ಮಹಂತಸ್ವಾಮೀಜಿ, ನಿಲಸೋಗೆ ಮಠದ ಮಲ್ಲಪ್ಪ ಸ್ವಾಮೀಜಿ, ಕೊತ್ತೇಗಾಲ ಮಠದ ಶ್ರೀ ನಾಗಪ್ಪ ಸ್ವಾಮೀಜಿ, ತಿ.ನರಸೀಪುರದ ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ಹೊಸೂರುಹುಂಡಿ ಮಠದ ಶ್ರೀ ರಾಜಶೇಖರಸ್ವಾಮೀಜಿ ಸೇರಿದಂತೆ ವಿವಿಧ ಗ್ರಾಮಗಳ ಮಠಾಧೀಶರು ಪಾಲ್ಗೊಂಡಿದ್ದರು. ವಿವಿಧ ಗ್ರಾಮಗಳ ಭಜನಾ ತಂಡದ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.


ನಂತರ ಶ್ರೀ ಗುರುಮಲ್ಲೇಶ್ವರರ ಭಾವಚಿತ್ರ ಮೆರವಣಿಗೆ ಮಂಗಳವಾದ್ಯ, ವೀರಗಾಸೆ ಕುಣಿತದೊಂದಿಗೆ ಗ್ರಾಮದ ವಿವಿಧ ಬೀದಿಗಳಲ್ಲಿ ನಡೆಯಿತು. ಪ್ರತಿ ಮನೆಯವರೂ ಹಣ್ಣು, ಕಾಯಿ ಅರ್ಪಿಸಿ ಭಕ್ತಿ ಮೆರೆದರು. ಮಠದ ಉದ್ಘಾಟನಾ ಸಮಾರಂಭದಲ್ಲಿ ದೊಡ್ಡನಹುಂಡಿ, ಮಾದಾಪುರ, ಚನ್ನಬಸವಯ್ಯನಹುಂಡಿ, ಟಿ.ದೊಡ್ಡಪುರ, ಶಂಭುದೇವನಪುರ, ತೊಟ್ಟವಾಡಿ, ಮಾವಿನಹಳ್ಳಿ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net