

ಸರಗೂರು: ಪರಿಸರ ಸಂರಕ್ಷಣೆ ಬರೀ ಸರ್ಕಾರದ ಹೊಣೆಯಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಎಂ.ಜಿ.ಯತೀಶ್ ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ಜನಧ್ವನಿ ಬಾನುಲಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರಕ್ಕೆ ಹೆಚ್ಚು ಹೊಗೆ ಬಿಡುವ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಶಬ್ದ ಮಾಲಿನ್ಯ ಹೆಚ್ಚುತ್ತಿರುವುದರಿಂದ ಜನರು ವೈಯಕ್ತಿಕ ವಾಹನಗಳನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಕೊಳಚೆ ಹಾಗೂ ಶೌಚಗೃಹದ ನೀರು ಚರಂಡಿ ಮೂಲಕ ಕಪಿಲಾ ನದಿಗೆ ಸೇರಿ ಮಲಿನವಾಗುತ್ತಿದೆ ಎಂದು ಸಾರ್ವಜನಿಕರು ಕರೆ ಮಾಡಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಯತೀಶ್, ಕಪಿಲಾ ನದಿಗೆ ಕಲುಷಿತ ನೀರು ಬಿಡುವುದನ್ನು ತಡೆಗಟ್ಟಲು ಆಯಾ ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ಅಧಿಕಾರಿಗಳು ಜವಾಬ್ದಾರಿ ತೆಗೆದು ಕೊಳ್ಳಬೇಕು, ತಪ್ಪಿದರೆ ನೋಟಿಸ್ ಜಾರಿ ಮಾಡಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಗತ್ತೂರು ಗ್ರಾಮದ ಪುಟ್ಟರಾಜು ಮಾತನಾಡಿ, ಕಾರ್ಖಾನೆ ಸ್ಥಾಪಿಸುತ್ತಿರುವುದು ಹಾಗೂ ರಸ್ತೆ ಬದಿಯಲ್ಲಿ ಮರಗಳನ್ನು ಕಡಿಯುವುದು ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ದೂರಿದರು.
ಪ್ರತಿಕ್ರಿಯಿಸಿದ ಪರಿಸರ ಅಧಿಕಾರಿ, ಬಂಜರು ಭೂಮಿಯಲ್ಲಿ ಕಾರ್ಖಾನೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ಹಳೆಯ ಹಾಗೂ ಅಪಾಯದಂಚಿನಲ್ಲಿರುವ ಮರಗಳನ್ನು ಕಡಿದು ಮತ್ತೆ ಹೊಸ ಗಿಡವನ್ನು ನೆಡುವಂಥ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ಜನಧ್ವನಿಯ ವ್ಯವಸ್ಥಾಪಕ ಶಿವಕುಮಾರ್ ಇದ್ದರು.