ಶ್ರೀರಾಮ ದೇವರ ರಥೋತ್ಸವಕ್ಕೆ ಸಿದ್ಧತೆ

13 KRN-1
Published on

ಕೆ.ಆರ್.ನಗರ: ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಯಲ್ಲಿ ಜ.16ರಂದು ಬೆಳಗ್ಗೆ 11.15 ರಿಂದ 11.50 ರೊಳಗೆ ಜರುಗುವ ಶ್ರೀರಾಮ ದೇವರ(ಕೋದಂಡರಾಮ) ಬ್ರಹ್ಮ ರಥೋತ್ಸವಕ್ಕೆ ತಾಲೂಕು ಆಡಳಿತ ಸಕಲ ಸಿದ್ಧತೆ ನಡೆಸಿದೆ.
ಸೋಮವಾರ ರಾತ್ರಿ ಶ್ರೀರಾಮ, ಸೀತಾ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರುಗಿತು. ರಥೋತ್ಸವಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ಕ್ರಮ ಕೈಗೊಂಡಿದೆ. ಖಜಾನೆಯಿಂದ ಶ್ರೀರಾಮ, ಸೀತಾದೇವಿ ಮತ್ತು ಲಕ್ಷ್ಮಣ ದೇವರ ಉತ್ಸವಮೂರ್ತಿಯ ಚಿನ್ನದ ಆಭರಣಗಳನ್ನು ದೇವಾಲಯಕ್ಕೆ ತರಲಾಗಿದೆ.
ರಥೋತ್ಸವದಲ್ಲಿ ತೇರಿಗೆ ಹಣ್ಣು-ದವನ ಎಸೆದರೆ ಭವಿಷ್ಯದಲ್ಲಿ ಶುಭವಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಜಿಲ್ಲೆ ಅಲ್ಲದೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಕಾವೇರಿ ನದಿಯಲ್ಲಿ ಮಿಂದು ದೇವಾಲಯದ ಆವರಣದಲ್ಲಿ ಅಡುಗೆ ಮಾಡಿ ಪ್ರಸಾದ ಸ್ವೀಕರಿಸಿ ಭಕ್ತಿ ಭಾವದಿಂದ ಶ್ರೀರಾಮನಿಗೆ ನಮಿಸುವ ಪದ್ಧತಿ ನಡೆದುಬಂದಿದೆ.
ರಥೋತ್ಸವಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಎಡತೊರೆ ಯೋಗಾನಂದೇಶ್ವರ ಮಠದ ಶಂಕರಭಾರತಿಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಸ್ವಾಮೀಜಿ, ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಪುರ ವಿರಕ್ತ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತ್ತು ಶಾಸಕ ಸಾ.ರಾ.ಮಹೇಶ್ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net