

ಕೆ.ಆರ್.ನಗರ: ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳದ ಪ್ರತಿಪಕ್ಷಗಳು, ಕೆಲ ಬುದ್ಧಿಜೀವಿಗಳನ್ನು ಎತ್ತಿಕಟ್ಟಿ ಪ್ರತಿಭಟಿಸುವ ಮೂಲಕ ಗಲಭೆ ಸೃಷ್ಟಿಸಿ ನಾಗರಿಕರ ಬದುಕಿನ ಜತೆ ಚೆಲ್ಲಾಟವಾಡುತ್ತಿವೆ ಎಂದು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಂ.ಶಿವಣ್ಣ ದೂರಿದರು.
ಪಟ್ಟಣದ ಅಂಬೆಡ್ಕರ್ ವೃತ್ತದ ಬಳಿ ತಾಲೂಕು ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೆಸ್, ಜೆಡಿಎಸ್ ಮತ್ತು ಇತರ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದ ನೆಲೆ ಕಳೆದುಕೊಳ್ಳುವ ಭೀತಿಯಿಂದ, ಮುಗ್ಧ ಜನರನ್ನು ದುರ್ಬಳಕೆ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿವೆ ಎಂದು ಆರೋಪಿಸಿದರು.
ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಹಾಗೂ ಪ್ರತಿಪಕ್ಷಗಳು ಮೊದಲು ಕಾಯ್ದೆಯ ಅಂಶಗಳನ್ನು ಅರ್ಥಮಾಡಿಕೊಂಡು ನಂತರ ಮಾತನಾಡಬೇಕು. ದೇಶದಲ್ಲಿರುವ ಯಾವುದೇ ಧರ್ಮದ, ಜಾತಿಯ ಪ್ರಜೆಗಳಿಗೆ ಈ ಕಾಯ್ದೆಯಿಂದ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಎಚ್.ವಿಜಯಂಶಂಕರ್ ಮಾತನಾಡಿ, ಇದು ಪೌರತ್ವ ಕೊಡುವ ಕಾಯ್ದೆಯೇ ವಿನಃ ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ. ನಿರಾಶ್ರಿತರು ಮತ್ತು ನುಸುಳುಕೋರರ ನಡುವೆ ವ್ಯತ್ಯಾಸವಿದ್ದು, ಇದರಿಂದ ನಿರಾಶ್ರಿತರಿಗೆ ಮಾತ್ರ ಕಾನೂನು ರಕ್ಷಣೆ ಸಿಗಲಿದೆ. ಜತೆಗೆ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿ ತೊಂದರೆಗೊಳಗಾಗಿರುವ 36 ಸಾವಿರ ಜನರು ಅನುಕೂಲ ಪಡೆಯಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರು ರಾಜಕೀಯ ಕಾರಣಿಗಳಿಗಾಗಿಯೇ ವಿನಃ ದೇಶದ ಮತ್ತು ನಾಗರಿಕರ ಮೇಲೆ ಯಾವುದೇ ಕಾಳಜಿ ಇಲ್ಲದವರಾಗಿದ್ದಾರೆ. ಆದ್ದರಿಂದ ಇಂತಹ ವಿರೋಧಿಗಳ ಮಾತಿಗೆ ಯಾರು ಕಿವಿಗೊಡದೆ 8866288662 ಸಂಖ್ಯೆಗೆ ಮಿಸ್‌ಕಾಲ್ ಕೊಡುವ ಮೂಲಕ ಕಾಯ್ದೆಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಾಲ್‌ರಾಜ್, ಪುರಸಭಾ ಸದಸ್ಯೆ ಕೆ.ಬಿ.ವೀಣಾ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ಮುಖಂಡರಾದ ಮಾರ್ಕಂಡಯ್ಯ, ರಾಚಯ್ಯ, ಮಹೇಶ್ವರಿ ಹಾಜರಿದ್ದರು.