ಕಂಪಲಾಪುರ ಸಹಕಾರ ಸಂಘಕ್ಕೆ 25.95 ಲಕ್ಷ ರೂ.ನಿವ್ವಳ ಲಾಭ

kamplapura APCCS
Published on

ಕಂಪಲಾಪುರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23ನೇ ಸಾಲಿನಲ್ಲಿ 25.95 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಹರ್ಷ ಹೇಳಿದರು.


ಸಂಘದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಾಲ ಪಡೆದ ಸದಸ್ಯರು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಿದರೆ ಸಂಘ ಮತ್ತಷ್ಟು ಲಾಭ ಗಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.


ನಿರ್ದೇಶಕ ಪ್ರಕಾಶ್ ಮಾತನಾಡಿ, 2018ರಲ್ಲಿ ಸಾಲ ಪಡೆದ 66 ಜನರು ಈವರೆಗೆ ಪಾವತಿ ಮಾಡಿಲ್ಲ. ಅವರ ಪಟ್ಟಿ ನನ್ನ ಬಳಿ ಇದೆ ಎಂದು ಒಬ್ಬೊಬ್ಬರ ಹೆಸರು ಹೇಳುತ್ತಿದ್ದಂತೆ ಮತ್ತೊಂದು ಗುಂಪಿನವರು ಎದ್ದು ನಿಂತು 10-15 ವರ್ಷಗಳ ಹಿಂದೆ ಲಕ್ಷಾಂತರ ರೂ.ಸಾಲ ಪಡೆದವರೂ ಈವರೆಗೆ ಕಟ್ಟಿಲ್ಲ. ಅವರ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಅವರ ಹೆಸರನ್ನೂ ಓದಿ ಎಂದು ಪಟ್ಟು ಹಿಡಿದರು.


ಇದಕ್ಕೆ ಉತ್ತರಿಸಿದ ಸಿಇಒ, ಕಳೆದ ಆಡಳಿತ ಮಂಡಳಿಯಿಂದಲೂ ನೋಟಿಸ್ ನೀಡಿದ್ದು, ಅದಕ್ಕೆ ದಾಖಲೆ ಇದೆ. ಆದರೆ ಈವರೆಗೆ ಪಾವತಿ ಮಾಡಿಲ್ಲ. ಈ ಬಗ್ಗೆ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದರು.


ಇದಕ್ಕೂ ಮೊದಲು ನಿಧನರಾದ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಘದ ಅಧ್ಯಕ್ಷ ನಾಗೇಗೌಡ , ಉಪಾಧ್ಯಕ್ಷ ತಮ್ಮಯ್ಯ, ನಿರ್ದೇಶಕರಾದ ಕೆ.ಕುಮಾರ್, ಕೆ.ಎಂ.ಲಕ್ಷ್ಮಣ್, ಸಂತೋಷ್, ರವಿ, ಮಹದೇವ , ಭಾಗ್ಯಾ ರಾಜೇಗೌಡ , ಮಣಿ ಮಹೇಶ್, ಮಹದೇವ್, ಪ್ರಕಾಶ್, ಗಿರೀಶ್, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಚ್.ಕೆ.ಜಗದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net