ಕಾಡಿಗೆ ಆನೆ ಓಡಿಸುವ ಕಾರ್ಯಾಚರಣೆ ಯಶಸ್ವಿ

23HDK 2
ಎಚ್.ಡಿ.ಕೋಟೆ ತಾಲೂಕಿನ ಆನಗಟ್ಟಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಾಡಾನೆ ಬೀಡು ಬಿಟ್ಟಿದ್ದು ಆನೆ ನೋಡಲು ಬಂದ ಜನರನ್ನು ಪೊಲೀಸ್ ಇಲಾಖೆ ತಡೆದಿರುವುದು.
Published on

ಎಚ್.ಡಿ. ಕೋಟೆ: ತಾಲೂಕಿನ ಆನಗಟ್ಟಿ ಗ್ರಾಮದ ಮಹದೇವು ಅವರ ಕಬ್ಬಿನ ಜಮೀನಿನಲ್ಲಿ ಬೀಡು ಬಿಟ್ಟಿದ್ದ ಒಂಟಿ ಆನೆಯನ್ನು ಶನಿವಾರ ಕಾಡಿಗೆ ಓಡಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ.


ಕಬ್ಬಿನ ಗದ್ದೆಯಿಂದ ಸಂಜೆ 6.30ರಲ್ಲಿ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಸಹಕಾರದಿಂದ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, 6.45ಕ್ಕೆ ಕಬ್ಬಿನ ಗದ್ದೆಯಿಂದ ಹೊರಗೆ ಬಂದ ಆನೆ ಮೈಸೂರು-ಮಾನಂದವಾಡಿ ಹೆದ್ದಾರಿ ದಾಟಿ ಶೀರನಹುಂಡಿ ಗ್ರಾಮ ಮೂಲಕ ಮಾಚನಾಯಕನಹಳ್ಳಿ, ಹಿರೇಹಳ್ಳಿ ಮಾರ್ಗವಾಗಿ ತಾರಕ ಗ್ರಾಮದ ಅರಣ್ಯ ಪ್ರದೇಶಕ್ಕೆ ತಲುಪಿತು. ಇದರಿಂದ ನಾಡಿಗೆ ಬಂದ ಕಾಡಾನೆಯಿಂದ ಆತಂಕಕ್ಕೆ ಒಳಗಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ ಜನರು ನಿಟ್ಟುಸಿರು ಬಿಟ್ಟರು.


ಕಾರ್ಯಾಚರಣೆಯಲ್ಲಿ ಪ್ರಾದೇಶಿಕ ಅರಣ್ಯದ ಆರ್‌ಎಫ್‌ಒ ಪೂಜಾ, ಡಿಆರ್‌ಎಫ್‌ಒ ಚಂದನ್, ಅರಣ್ಯ ಸಿಬ್ಬಂದಿ ಲಾಲಪ್ಪ, ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್, ಸಬ್‌ಇನ್ಸ್‌ಪೆಕ್ಟರ್ ರವಿಶಂಕರ್, ಎಎಸ್‌ಐಗಳಾದ ಆರ್.ಕುಮಾರ್, ನಿಂಗಯ್ಯ, ಮಹದೇವು, ಸಿಬ್ಬಂದಿ ಕೃಷ್ಣಕುಮಾರ್, ನಾಗೇಗೌಡ ಇತರರು ಇದ್ದರು.
ಹಿನ್ನೀರಿನಿಂದ ಬಂದ ಆನೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವಲಯದಿಂದ ತಾರಕ ಜಲಾಶಯದ ಹಿನ್ನೀರಿನಿಂದ ಬಂದಿರುವ ಆನೆಯು ಆನಗಟ್ಟಿ ಗ್ರಾಮದ ಹಲವು ಜಮೀನುಗಳ ಮೂಲಕ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪುಟ್ಟಸ್ವಾಮಿ ಅವರ ಜಮೀನಿನಲ್ಲಿ ಆನೆ ಲದ್ದಿ ಹಾಕಿರುವುದು ಕಂಡುಬಂದಿದೆ. ಅರಣ್ಯ ಸಿಬ್ಬಂದಿಯು ಹೆಜ್ಜೆ ಗುರುತನ್ನು ಗಮನಿಸಿ ಆನೆ ಇರುವುದನ್ನು ಖಚಿತಪಡಿಸಿದ್ದಾರೆ.


ಕಬ್ಬಿನ ಗದ್ದೆಯಲ್ಲಿ ಆನೆ ಇರುವುದರಿಂದ ಕಾರ್ಯಾಚರಣೆಯನ್ನು ಸಂಜೆ ವೇಳೆಗೆ ಆರಂಭಿಸಲು ತೀರ್ಮಾನಿಸಿ ಈ ಭಾಗದ ಜಮೀನುಗಳಿಗೆ ರೈತರು ಬಾರದಂತೆ ಮನವಿ ಮಾಡಿದರು. ಕಬ್ಬಿನ ಗದ್ದೆಯ ಸುತ್ತಲೂ ಆನೆಯ ಚಲನವಲನವನ್ನು ವೀಕ್ಷಿಸಲು ಅರಣ್ಯ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.


ವಿದ್ಯುತ್ ಸಂಪರ್ಕ ಕಡಿತ: ಆನೆ ಗ್ರಾಮಕ್ಕೆ ಬರುತ್ತಿದ್ದಂತೆ ಆನಗಟ್ಟಿ ಗ್ರಾಮದ ಸುತ್ತ 10 ಕಿಲೋಮೀಟರ್‌ಗೂ ಹೆಚ್ಚು ಪ್ರದೇಶದಲ್ಲಿ ಸೆಸ್ಕ್ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಗ್ರಾಮದಲ್ಲಿ ಬೀಡು ಬಿಟ್ಟಿರುವ ಹಿನ್ನ್ನೆಲೆಯಲ್ಲಿ ಆನಗಟ್ಟಿ, ನೂರಲಕುಪ್ಪೆ, ಯಲಮತ್ತೂರು ಗ್ರಾಮದ ರೈತರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿ ಜಮೀನಿಗೆ ತೆರಳದಂತೆ ಸೂಚಿಸಿದ್ದಾರೆ.


ಡ್ರೋನ್ ಕ್ಯಾಮರಾ ಸಹಾಯ: ಆನೆ ಸಂಜೆಯಾದರೂ ಬಾರದ ಹಿನ್ನೆಲೆಯಲ್ಲಿ ಮೈಸೂರಿನಿಂದ ಡ್ರೋನ್ ಕ್ಯಾಮರಾ ತರಿಸಲಾಯಿತು. ಡ್ರೋನ್ ಮೂಲಕ ಆನೆಯ ಚಲನವಲನವನ್ನು ಕಂಡುಹಿಡಿಯಲು ಪ್ರಯತ್ನಿಸಲಾಯಿತು.


ಸಂಜೆ 6 ಗಂಟೆಯಾಗುತ್ತಿದ್ದಂತೆ ಆನೆ ಓಡಿಸಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಪಟಾಕಿ ಸಿಡಿಸಲಾಯಿತು. ಜಾತ್ರೆಯ ಪೀಪಿಗಳನ್ನು ಊದುತ್ತ ಶಬ್ದ ಮಾಡಲಾಯಿತು. ಅಲ್ಲದೆ ಎಲಿಫೆಂಟ್ ಟಾಸ್ಕ್‌ಫೋರ್ಸ್ ವಾಹನದ ಮೂಲಕ ಶಬ್ದವನ್ನು ಮಾಡಿದರೂ ಆನೆ ಕಬ್ಬಿನ ಗದ್ದೆಯಿಂದ ಹೊರಬಾರದೆ ಜಮೀನಿನಲ್ಲೇ ಉಳಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net