ವಿಶ್ವವಿಖ್ಯಾತ ದಸರಾ; ಮೈಸೂರು ಅರಮನೆಯಲ್ಲಿ ವಿಜಯದಶಮಿ ಆಚರಣೆ ಆರಂಭ...

Dasara
Published on

ಮೈಸೂರು: ದಸರಾ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯಲ್ಲಿ ಸರಳ ವಿಜಯದಶಮಿ ಆಚರಣೆಗಳು ಆರಂಭಗೊಂಡಿದ್ದು, ಇಂದು ರಾಜವಂಶಸ್ಥರಿಂದ ಉತ್ತರ ಪೂಜೆ ನೆರವೇರಲಿದೆ.

ಬೆಳಗ್ಗೆ 9.30ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸುಗಳು ಆನೆ ಬಾಗಿಲಿಗೆ ಆಗಮಿಸಲಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ವಿಜಯಯಾತ್ರೆ ಹೊರಡಲಿದ್ದಾರೆ. ಬೆಳಗ್ಗೆ 9.45ಕ್ಕೆ ಖಾಸ ಆಯುಧಗಳಿಗೆ ಉತ್ತರ ಪೂಜೆ ನಡೆಯಲಿದ್ದು, ನಂತರ ಅವುಗಳನ್ನು ಬೆಳ್ಳಿ ರಥದಲ್ಲಿ ಭುವನೇಶ್ವರಿ ದೇವಾಲಯಕ್ಕೆ ರವಾನಿಸಲಾಗುವುದು. ಭುವನೇಶ್ವರಿ ದೇವಾಲಯದಲ್ಲಿ ಯದುವೀರ ಅವರು ಬನ್ನಿಪೂಜೆ ನೆರವೇರಿಸಲಿದ್ದಾರೆ. ವಿಜಯಯಾತ್ರೆ ಮುಗಿದ ತಕ್ಷಣ ಚಾಮುಂಡೇಶ್ವರಿ ಮೂರ್ತಿ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಆಗಲಿದೆ.

ಇತಿಹಾಸದಲ್ಲೇ ಮೊದಲು: ಕರೊನಾ ಹಿನ್ನೆಲೆಯಲ್ಲಿ ದಸರಾ ಅತಿ ಸರಳವಾಗಿ ಆಚರಣೆ ಆಗುತ್ತಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಭಾರಿ ಜನಸ್ತೋಮವಿಲ್ಲದೆ ದಸರಾ ನಡೆಯುತ್ತಿದೆ. ಕರೊನಾ ಕಾರಣಕ್ಕೆ ಈ ಬಾರಿ ವಜ್ರಮುಷ್ಠಿ ಕಾಳಗ ನಡೆಯುತ್ತಿಲ್ಲ.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ದಸರಾ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2.59ರಿಂದ 3.20ರ ಮಕರ ಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅವರಿಂದ ನಂದಿಧ್ವಜಕ್ಕೆ ಪೂಜೆ ನೆರವೇರಲಿದೆ. ಮಧ್ಯಾಹ್ನ 3.40ರಿಂದ 4.15ರ ಕುಂಭ ಲಗ್ನದಲ್ಲಿ ಯಡಿಯೂರಪ್ಪ ಹಾಗೂ ಯದುವೀರ್‌ ಅವರಿಂದ ಪುಷ್ಪಾರ್ಚನೆ ನಡೆಯಲಿದೆ. ಈ ಬಾರಿ ಜಂಬೂ ಸವಾರಿ 300 ಮೀಟರ್ ಮಾತ್ರ ಸಾಗಲಿದ್ದು, ಎರಡು ಟ್ಯಾಬ್ಲೋಗಳಿಗಷ್ಟೇ ಅವಕಾಶ ನೀಡಲಾಗಿದೆ.

ಯದುವೀರ್ ಅವರು ಸಾಮಾಜಿಕ ಜಾಲತಾಣದ ಮೂಲಕ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಶುಭ ಪರ್ವದ ಹಾರ್ದಿಕ ಶುಭಾಶಯಗಳು ಎಂದು ಅವರು ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net