ವರುಣಾರ್ಭಟಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಮೈದುಂಬಿದ ನದಿಗಳು

tunga
ಶಿವಮೊಗ್ಗದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿ
Published on

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ವರುಣಾರ್ಭಟ ಮುಂದುವರಿದಿದೆ. ಮಳೆ ಅಬ್ಬರಕ್ಕೆ ಶಿಕಾರಿಪುರ ತಾಲೂಕಿನಲ್ಲಿ 15 ಮನೆಗಳು ಹಾಗೂ 5 ಕೊಟ್ಟಿಗೆಗಳಿಗೆ ಭಾಗಶಃ ಹಾನಿಗೀಡಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು.

ಇನ್ನೊಂದೆಡೆ ಹೊಸನಗರ ತಾಲೂಕಿನ ಬಾಳೆಬರೆ ಘಾಟಿಯಲ್ಲಿ ಗುಡ್ಡ ಕುಸಿದು 10 ದಿನಗಳಾದರೂ ಅಲ್ಲಿನ ಮಣ್ಣನ್ನು ತೆರವುಗೊಳಿಸಿಲ್ಲ. ಹೀಗಾಗಿ ವಾಹನ ಸಂಚಾರರು ಆತಂಕದಿಂದ ಆ ಮಾರ್ಗದಲ್ಲಿ ಸಂಚರಿಸಬೇಕಿದೆ. ರಸ್ತೆಯ ಎದುರು ಭಾಗದಿಂದ ವಾಹನ ಬಂದರೆ ಅಲ್ಲಿ ಸಾಗಲು ಅವಕಾಶವೇ ಇಲ್ಲದಂತಾಗಿದೆ. ಸಾಗರ ತಾಲೂಕಿನ ತ್ಯಾಗರ್ತಿ ಹಾಗೂ ತಾಳಗುಪ್ಪದಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿವೆ.
ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಶರಾವತಿ, ಮಾಲತಿ, ಕುಮದ್ವತಿ, ಶರ್ಮಣಾವತಿ, ವರದಾ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕೋರ್ಪಲಯ್ಯನ ಛತ್ರದ ಬಳಿಯ ಮಂಟಪ ಸಂಪೂರ್ಣ ಮುಳುಗಿದೆ.
ಲಿಂಗನಮಕ್ಕಿ ಜಲಾಶಯದ ಒಳಹರಿವು 77,911 ಕ್ಯೂಸೆಕ್‌ಗೆ ಹೆಚ್ಚಳವಾಗಿದೆ. ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಹೀಗಾಗಿ 1819 ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ನೀರಿನ ಮಟ್ಟ 1782. 15 ಅಡಿಗೆ ತಲುಪಿದೆ. ಕಳೆದ 24 ತಾಸಿನಲ್ಲಿ 4 ಅಡಿ ನೀರು ಸಂಗ್ರಹವಾಗಿದೆ.
ಶೃಂಗೇರಿ, ಕೊಪ್ಪ, ಆಗುಂಬೆ, ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಾಜನೂರು ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅಣೆಕಟ್ಟೆಯಿಂದ 42,683 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಶಿವಮೊಗ್ಗದಲ್ಲಿ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಗಾಜನೂರಿನ ತುಂಗಾ ಜಲಾಶಯದಿಂದ ಹೊರಹರಿವು ಇನ್ನು 20 ಸಾವಿರ ಕ್ಯೂಸೆಕ್ ಹೆಚ್ಚಿಸಿದರೆ ಶಿವಮೊಗ್ಗದ ಸೀಗೆಹಟ್ಟೆ ಭಾಗಕ್ಕೆ ನೀರು ನುಗ್ಗುವ ಅಪಾಯವಿದೆ. ಈಗಾಗಲೇ ನದಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಸಂಪೂರ್ಣ ಭರ್ತಿಯಾಗಿ ನೀರು ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net