ಡೊನಾಲ್ಡ್​ ಟ್ರಂಪ್​ ಆಡಳಿತದಿಂದ ಹೊರಬಂದ ಎಲಾನ್​ ಮಸ್ಕ್​! ಹೀಗಿದೆ ನೋಡಿ ಕಾರಣ...Elon Musk

Elon Musk
Published on

Elon Musk : ಪ್ರಸಿದ್ಧ ಬಿಲಿಯನೇರ್ ಹಾಗೂ ವಿಶ್ವದ ನಂಬರ್​ 1 ಶ್ರೀಮಂತ ಎಲಾನ್ ಮಸ್ಕ್ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವನ್ನು ತೊರೆಯುತ್ತಿರುವುದಾಗಿ ಮಸ್ಕ್​ ಘೋಷಿಸಿದ್ದಾರೆ. ಸರ್ಕಾರಿ ದಕ್ಷತೆ ಇಲಾಖೆಯ (DOGE) ಉಸ್ತುವಾರಿ ಹೊಂದಿರುವ ಮಸ್ಕ್, ಆ ಜವಾಬ್ದಾರಿಗಳಿಂದ ಹಿಂದೆ ಸರಿಯುತ್ತಿರುವುದಾಗಿ ಇದೀಗ ಘೋಷಣೆ ಮಾಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಮಸ್ಕ್​ ಪೋಸ್ಟ್ ಮಾಡಿದ್ದಾರೆ. ಅಮೆರಿಕ ಸರ್ಕಾರದಲ್ಲಿ ವಿಶೇಷ ಸರ್ಕಾರಿ ಉದ್ಯೋಗಿಯಾಗಿ ನನ್ನ ವೇಳಾಪಟ್ಟಿ ಕೊನೆಗೊಂಡಿದೆ. ಸರ್ಕಾರದಲ್ಲಿ ಅನಗತ್ಯ ವೆಚ್ಚವನ್ನು ಕಡಿಮೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಧನ್ಯವಾದಗಳು. ಭವಿಷ್ಯದಲ್ಲಿ DOGE ಮಿಷನ್ ಇನ್ನಷ್ಟು ಬಲವಾಗಲಿದ್ದು, ಅದು ಸರ್ಕಾರದ ಜೀವನ ವಿಧಾನವಾಗುತ್ತದೆ ಎಂದಿದ್ದಾರೆ.

ಅಂದಹಾಗೆ, ಡೊನಾಲ್ಡ್​ ಟ್ರಂಪ್ ಅವರ ಇತ್ತೀಚಿನ ನಿರ್ಧಾರಗಳಿಂದ ಮಸ್ಕ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚಿನ ತೆರಿಗೆ ನೀತಿಗಳನ್ನು ಮಸ್ಕ್​ ಟೀಕಿಸಿದ್ದರು. ಅಲ್ಲದೆ, ಟ್ರಿಲಿಯನ್​ಗಟ್ಟಲೆ ಡಾಲರ್ ತೆರಿಗೆಗಳನ್ನು ಪಾವತಿಸದಿರುವುದು ತಪ್ಪು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ರಕ್ಷಣಾ ವೆಚ್ಚದಲ್ಲಿನ ಹೆಚ್ಚಳವನ್ನೂ ಮಸ್ಕ್​ ಟೀಕಿಸಿದ್ದರು. ಇದೇ ಸಂದರ್ಭದಲ್ಲಿ, ಯೂಟರ್ನ್​ ತೆಗೆದುಕೊಂಡ ಮಸ್ಕ್​, ಟ್ರಂಪ್ ಅವರ ನೀತಿಗಳು ಸರಿಯಾಗಿವೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ಟ್ರಂಪ್​ಗೆ ಪಾಸಿಟಿವ್​ ಆಗಿ ಮಾತನಾಡಿ ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಂಡಿರಬಹುದು ಎಂದು ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರು ಎಲಾನ್​ ಮಸ್ಕ್ ಅವರನ್ನು ತಮ್ಮ ಆಡಳಿತ ವರ್ಗಕ್ಕೆ ಸೇರಿಸಿಕೊಳ್ಳುವುದಾಗಿ ಘೋಷಿಸಿದ್ದರು. ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಮಸ್ಕ್ ಅವರನ್ನು ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥರನ್ನಾಗಿ ನೇಮಿಸಿದರು. ಆ ಸಮಯದಲ್ಲಿ DOGE ಇಲಾಖೆಯು ಯುಎಸ್ ಸರ್ಕಾರಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಲು ಮತ್ತು ಸರ್ಕಾರದ ದಕ್ಷತೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಎಂದು ಟ್ರಂಪ್ ಘೋಷಿಸಿದರು.

ಸರ್ಕಾರಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಮತ್ತು ಸರ್ಕಾರಿ ಇಲಾಖೆಗಳಲ್ಲಿ ವ್ಯರ್ಥ ವೆಚ್ಚವನ್ನು ಕಡಿಮೆ ಮಾಡುವ ಗುರಿಯೊಂದಿಗೆ ಈ ಇಲಾಖೆ ಕೆಲಸ ಮಾಡಿದೆ. ತಮ್ಮ ಅಧಿಕಾರದ ಅವಧಿಯಲ್ಲಿ ಮಸ್ಕ್ ಅವರ ನಡವಳಿಕೆ ಶೈಲಿಯು ಡೆಮೋಕ್ರಾಟ್‌ಗಳಿಂದ ಮಾತ್ರವಲ್ಲದೆ ರಿಪಬ್ಲಿಕನ್ನರಿಂದಲೂ ತೀವ್ರ ಟೀಕೆಗೆ ಗುರಿಯಾಯಿತು. ಆದಾಗ್ಯೂ, ದೀರ್ಘಾವಧಿಯ ಅಭಿವೃದ್ಧಿಗಾಗಿ, ಕೆಲವು ವಿಷಯಗಳನ್ನು ತ್ಯಜಿಸಬೇಕಾಗಿತ್ತು ಎಂದು ಹೇಳುವ ಮೂಲಕ ಮಸ್ಕ್ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡರು.

ಸರ್ಕಾರಿ ಇಲಾಖೆಗಳಲ್ಲಿ ವ್ಯರ್ಥ ವೆಚ್ಚವನ್ನು ಕಡಿತಗೊಳಿಸುವುದು, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಮತ್ತು ಫೆಡರಲ್ ಸಂಸ್ಥೆಗಳನ್ನು ಪುನಾರಚಿಸುವುದು DOGE ಮಾಡಬೇಕಾದ ಕೆಲಸಗಳು. ಇದರ ಭಾಗವಾಗಿ, ಸರ್ಕಾರಿ ಇಲಾಖೆಗಳಲ್ಲಿ ಭಾರಿ ಉದ್ಯೋಗ ಕಡಿತಗಳನ್ನು ತೆಗೆದುಕೊಳ್ಳಲಾಗಿದೆ. ಇದೀಗ ಮಸ್ಕ್ ತಮ್ಮ ನಿರ್ಧಾರದೊಂದಿಗೆ DOGE ನಿಂದ ಹೊರಬಂದಿದ್ದು, ಡೊನಾಲ್ಡ್​ ಟ್ರಂಪ್ DOGE ಗೆ ಹೊಸ ಮುಖ್ಯಸ್ಥರನ್ನು ನೇಮಿಸುತ್ತಾರೆಯೇ? ಅಥವಾ ಅವರು ಆ ವ್ಯವಸ್ಥೆಯನ್ನೇ ರದ್ದುಗೊಳಿಸುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net