ಶೀಘ್ರದಲ್ಲೇ ಜಾಗತಿಕವಾಗಿ ಬದಲಾಗಲಿದೆ ಚಿನ್ನದ ಬೆಲೆ: ಪತ್ತೆಯಾಯ್ತು ವಿಶ್ವದ ಅತಿದೊಡ್ಡ ಚಿನ್ನದ ಗಣಿ! Gold Prices

Gold Prices
Published on

Gold Prices : ಚೀನಾ ದೇಶವನ್ನು ಅತ್ಯಂತ ಶ್ರೀಮಂತವಾಗಿಸುವ ಬೃಹತ್ ಚಿನ್ನದ ಗಣಿ ಪತ್ತೆಯಾಗಿದೆ. ಹುನಾನ್ ಪ್ರಾಂತ್ಯದ ಪಿಂಗ್ಜಿಯಾಂಗ್ ಕೌಂಟಿಯಲ್ಲಿರುವ ವಾಂಗು ಗೋಲ್ಡ್​ ಫೀಲ್ಡ್​ನಲ್ಲಿ ಹೊಸ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇದರಲ್ಲಿ ಸುಮಾರು ಒಂದು ಮಿಲಿಯನ್ ಕೆಜಿ ಅಥವಾ 1,000 ಟನ್ ಚಿನ್ನವಿದೆ ಎಂದು ವರದಿಯಾಗಿದೆ. ತಜ್ಞರು ಇದನ್ನು ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪ ಎಂದು ಕರೆದಿದ್ದಾರೆ.

ನೆಲದಿಂದ ಸುಮಾರು 3,000 ಮೀಟರ್ ಆಳದಲ್ಲಿ ಚಿನ್ನ ಪತ್ತೆಯಾಗಿದೆ. ಈ ಚಿನ್ನದ ಗಣಿಯು, ಉದ್ಯಮದಲ್ಲಿ ಜಾಗತಿಕ ನಾಯಕ ಎಂದು ಕರೆಯಲ್ಪಡುವ ಚೀನಾದ ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡಲಿದೆ. ಇಷ್ಟೊಂದು ಪ್ರಮಾಣದ ಚಿನ್ನದ ಆವಿಷ್ಕಾರವು ಚೀನಾದ ಜಾಗತಿಕ ಸಂಪತ್ತನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಜಾಗತಿಕ ಚಿನ್ನದ ಮಾರುಕಟ್ಟೆಯ ಬೆಲೆಯನ್ನು ಸಹ ಬದಲಾಯಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಗಣಿಯಲ್ಲಿ ಪ್ರತಿ ಟನ್ ಕಲ್ಲಿಗೆ 138 ಗ್ರಾಂ ಚಿನ್ನ ಪತ್ತೆಯಾಗಿದೆ. ಪ್ರಪಂಚದಾದ್ಯಂತದ ಅನೇಕ ಚಿನ್ನದ ಗಣಿಗಳಿಗೆ ಹೋಲಿಸಿದರೆ ಇದು ತುಂಬಾ ಹೆಚ್ಚಿನ ಪ್ರಮಾಣವಾಗಿದೆ. ಸಾಮಾನ್ಯವಾಗಿ ಪ್ರತಿ ಟನ್ ಕಲ್ಲಿಗೆ ಎರಡರಿಂದ ಎಂಟು ಗ್ರಾಂ ಚಿನ್ನ ಕಂಡುಬರುತ್ತದೆ. ಆದ್ದರಿಂದ, ಚೀನಾದಲ್ಲಿನ ಆವಿಷ್ಕಾರವನ್ನು ಜಗತ್ತು ಕ್ರಾಂತಿಕಾರಿ ಎಂದು ಪರಿಗಣಿಸುತ್ತಿದೆ.

ಇನ್ನು ಚಿನ್ನದ ನಿಕ್ಷೇಪ ಪತ್ತೆಯಿಂದ ಆ ಪ್ರದೇಶದಲ್ಲಿ ಹಲವು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಜ್ಞರು ಹೇಳಿದ್ದಾರೆ. ಜಾಗತಿಕ ಚಿನ್ನದ ವ್ಯಾಪಾರದಲ್ಲಿ ಚೀನಾ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ಚೀನಾ ದೇಶದ ನೈಸರ್ಗಿಕ ಸಂಪನ್ಮೂಲ ನೆಲೆಯನ್ನು ಬಲಪಡಿಸಲು ಸಹ ಸಾಧ್ಯವಾಗುತ್ತದೆ. ಈ ಚಿನ್ನವನ್ನು ಗಣಿಗಾರಿಕೆ ಮಾಡಲು ಚೀನಾ ಸರ್ಕಾರ ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net