

Honeymoon : ನಟಿ ಕಂಗನಾ ರಣಾವತ್ ಅಭಿನಯದ ಬಾಲಿವುಡ್ ಸಿನಿಮಾ 'ಕ್ವೀನ್' ನೋಡಿದ್ದೀರಾ? ಈ ಚಿತ್ರಕ್ಕಾಗಿ ಕಂಗನಾಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ಈ ಚಿತ್ರದಲ್ಲಿ ನಾಯಕಿ ರಾಣಿ (ಕಂಗನಾ) ಕಾರಣಾಂತರಗಳಿಂದ ಮದುವೆಗೂ ಕೆಲವು ಗಂಟೆಗಳ ಮೊದಲು ನಿಶ್ಚಿತ ವರ ವಿಜಯ್ (ರಾಜ್‌ಕುಮಾರ್ ರಾವ್) ನನ್ನು ಮದುವೆಯಾಗಲು ನಿರಾಕರಿಸುತ್ತಾಳೆ. ಈ ಘಟನೆಯ ನಂತರ ರಾಣಿ ದುಃಖದಲ್ಲಿ ಮುಳುಗದೆ ಒಂಟಿಯಾಗಿ ಹನಿಮೂನ್‌ಗೆ ಹೋಗುತ್ತಾಳೆ. ಇದು ಕೇವಲ ಸಿನಿಮಾ ಕಥೆ. ಆದರೆ, ಕೆನಡಾದಲ್ಲಿ ಇಂತಹದ್ದೇ ಒಂದು ನೈಜ ಘಟನೆ ನಡೆದಿದೆ. ಆದರೆ, ಈ ಕಥೆ ತುಂಬಾ ದುಃಖಕರವಾಗಿದೆ.
ಕೆನಡಾದ ಲಾರಾ ಮರ್ಫಿ ಎಂಬಾಕೆ ಟಿಕ್‌ಟಾಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮದುವೆಗೆ ಒಂದು ತಿಂಗಳ ಮುಂಚೆಯೇ ತನ್ನ ನಿಶ್ಚಿತ ವರ ನಿಧನರಾದರು ಎಂದು ಹೇಳಿದ್ದಾರೆ. 31 ವರ್ಷ ವಯಸ್ಸಿನ ಡೆವೊನ್ ಮೃತಪಟ್ಟನು. ಇದು ನನ್ನ ಜೀವನ ಆಘಾತಕಾರಿ ಸಂಗತಿ. ಮದುವೆಗೆ ಮೊದಲೇ ನಾವಿಬ್ಬರು ಹನಿಮೂನ್ ಪ್ಲಾನ್ ಮಾಡಿದ್ದೆವು. ಭಾವಿ ಪತಿಗೆ ಲಂಡನ್ ಇಷ್ಟವಾಗಿತ್ತು. ಆದರೆ, ಮದುವೆಗೂ ಮುನ್ನವೇ ಅವರು ಮೃತರಾದರು ಎಂದು ಮರ್ಫಿ ಭಾವುಕರಾದರು.
ತನ್ನ ಭಾವಿ ಪತಿ ತೀರಿಕೊಂಡ ನಂತರ ಆತನ ನೆನಪಿಗಾಗಿ ಮರ್ಫಿ, ಒಬ್ಬಳೇ ಹನಿಮೂನ್‌ಗೆ ಹೋಗಿದ್ದಳು. ತಮ್ಮ ಪ್ರವಾಸದ ವಿಡಿಯೋ ಕ್ಲಿಪ್ ಅನ್ನು ಮರ್ಫಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದುಃಖವು ನಿಮ್ಮನ್ನು ತುಂಬಾ ಒಂಟಿಯನ್ನಾಗಿ ಮಾಡುತ್ತದೆ. ಹಾಗಾಗಿ ನನ್ನ ಪ್ರಯಾಣವನ್ನು ರೆಕಾರ್ಡ್ ಮಾಡಲು ನಿರ್ಧರಿಸಿದೆ ಎಂದು ಮರ್ಫಿ ಹೇಳಿದರು.
ಬಹುಶಃ ಹೀಗೆಯೇ ಇರಬಹುದು, ಮರಣಾನಂತರದ ಬದುಕನ್ನು ತಲುಪಿದ ಡೆವೊನ್‌ನೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ಮರ್ಫಿ ಭಾವನಾತ್ಮಕವಾಗಿ ಹೇಳಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆಯ ಕಥೆಯನ್ನು ಕೇಳಿದ ನೆಟ್ಟಿಗರು ಭಾವುಕರಾಗಿದ್ದಾರೆ. (ಏಜೆನ್ಸೀಸ್)