

ಬೆಂಗಳೂರು: ಇತ್ತೀಚೆಗೆ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಸೇಲಾಗದೆ ಉಳಿದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬೇಡದ ದಾಖಲೆಗೆ ಪಾತ್ರರಾಗಿದ್ದಾರೆ.
ಕೇರಳ ವಿರುದ್ಧದ ಪಂದ್ಯದಲ್ಲಿ ಮುಂಬೈನ 32 ವರ್ಷದ ಶಾರ್ದೂಲ್ ತನ್ನ 4 ಓವರ್ ಕೋಟಾದಲ್ಲಿ 1 ವಿಕೆಟ್ ಪಡೆದು ಬರೋಬ್ಬರಿ 69 ರನ್ ಬಿಟ್ಟುಕೊಡುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ನೀಡಿದ ಬೌಲರ್ ಎನಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅರುಣಾಚಲ ಪ್ರದೇಶದ ರಮೇಶ್ ರಾಹುಲ್ ಸಹ ಹರಿಯಾಣ ವಿರುದ್ಧ 69 ರನ್ ಬಿಟ್ಟುಕೊಟ್ಟಿದ್ದರು.
ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ಕೇರಳ ತಂಡ 43 ರನ್‌ಗಳಿಂದ ಮುಂಬೈ ತಂಡವನ್ನು ಮಣಿಸಿತು. ಕೇರಳ ನೀಡಿದ 234 ರನ್‌ಗಳಿಗೆ ಪ್ರತಿಯಾಗಿ ಮುಂಬೈ 9 ವಿಕೆಟ್‌ಗೆ 191 ರನ್‌ಗಳಿಸಲಷ್ಟೇ ಶಕ್ತಗೊಂಡಿತು. 2010ರಲ್ಲಿ ಮುಂಬೈ ವಿರುದ್ಧ ಹೈದರಾಬಾದ್‌ನ ಪಗಡಲ ನಾಯ್ಡು 67 ರನ್ ನೀಡಿದ್ದು ಹಿಂದಿನ ಕಳಪೆ ಬೌಲಿಂಗ್ ನಿರ್ವಹಣೆ ಎನಿಸಿತ್ತು.
ವಿಕೆಟ್ ಕೀಪರ್ ಸಹಿತ 11 ಆಟಗಾರ ಬೌಲಿಂಗ್!: ದೆಹಲಿ ತಂಡ ಟಿ20 ಇನಿಂಗ್ಸ್‌ವೊಂದರಲ್ಲಿ ವಿಕೆಟ್ ಕೀಪರ್ ಸಹಿತ ತನ್ನ ಎಲ್ಲ 11 ಆಟಗಾರರಿಗೆ ಬೌಲಿಂಗ್‌ಗೆ ಅವಕಾಶ ಕಲ್ಪಿಸುವ ಮೂಲಕ ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ. ಅಧಿಕೃತ ಟಿ20 ಪಂದ್ಯದಲ್ಲಿ 11 ಆಟಗಾರರು ಬೌಲಿಂಗ್ ನಡೆಸಿದ ವಿಶ್ವದ ಮೊದಲ ದೃಷ್ಟಾಂತ ಇದಾಗಿದೆ. ಇದುವರೆಗಿನ ಟಿ20ಯಲ್ಲಿ ಯಾವುದೇ ತಂಡ 9ಕ್ಕಿಂತ ಹೆಚ್ಚು ಆಟಗಾರರಿಗೆ ಬೌಲಿಂಗ್ ಅವಕಾಶ ಕಲ್ಪಿಸಿರಲಿಲ್ಲ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮಣಿಪುರ ವಿರುದ್ಧ ಪಂದ್ಯದಲ್ಲಿ ದೆಹಲಿ ತಂಡದ ವಿಕೆಟ್ ಕೀಪರ್ ಅನುಜ್ ರಾವತ್ ಸಹಿತ ಎಲ್ಲ 11 ಆಟಗಾರರು ಕನಿಷ್ಠ ಒಂದು ಓವರ್ ಬೌಲಿಂಗ್ ನಡೆಸಿದರು. ಮೊದಲು ಬ್ಯಾಟಿಂಗ್‌ಗೆ ಇಳಿದ ಮಣಿಪುರ ತಂಡವನ್ನು 8 ವಿಕೆಟ್‌ಗೆ 120 ರನ್‌ಗಳಿಗೆ ನಿಯಂತ್ರಿಸಿದ ದೆಹಲಿ ತಂಡ, 18.3 ಓವರ್‌ಗಳಲ್ಲಿ 6 ವಿಕೆಟ್‌ಗೆ 124 ರನ್‌ಗಳಿಸಿ ಗೆಲುವು ದಾಖಲಿಸಿತು. ಇದುವರೆಗೆ ಟಿ20 ಕ್ರಿಕೆಟ್‌ನಲ್ಲಿ 9 ಆಟಗಾರರು ಬೌಲಿಂಗ್ ನಡೆಸಿದ 42ನೇ ದೃಷ್ಟಾಂತಗಳು ದಾಖಲಾಗಿವೆ. ಐಪಿಎಲ್ 2 ಬಾರಿಯೂ ದಾಖಲಾಗಿದೆ.
2002ರಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡದ ಎಲ್ಲ ಆಟಗಾರರು ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದರು.