ನನ್ನ ಕ್ಷೇತ್ರಕ್ಕೆ 10 ರೂಪಾಯಿನೂ ಕೊಟ್ಟಿಲ್ಲ

siddu savadi mar 20
Published on

ಬೆಂಗಳೂರು: ಸಾಮಾನ್ಯವಾಗಿ ಕಾನೂನು ಸಂಸದೀಯ, ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನ್ನು ವಿಧಾನಸಭೆಯಲ್ಲಿ ಎಲ್ಲರೂ ಗಂಭೀರವಾಗಿ ಆಲಿಸುತ್ತಾರೆ ಮತ್ತು ಅವರ ಸಲಹೆಯನ್ನೂ ಪರಿಗಣಿಸುತ್ತಾರೆ. ಆದರೆ, ಮಂಗಳವಾರ ವ್ಯತಿರಿಕ್ತ ಬೆಳವಣಿಗೆ ನಡೆಯಿತು. ಆಡಳಿತ ಪಕ್ಷದ ಹಿರಿಯ ಸದಸ್ಯ, ತೇರದಾಳ ಕ್ಷೇತ್ರದ ಸಿದ್ದು ಸವದಿ ಅವರು ಸಚಿವರ ಮೇಲೆ ಮಾತಿನ ಸವಾರಿ ನಡೆಸಿದರು.

ಈ ಕ್ಷಣ ಕಂಡು ಪ್ರತಿಪಕ್ಷ ಸದಸ್ಯರೂ ಒಂದು ಕ್ಷಣ ಅವಕ್ಕಾದರು. ‘ನನ್ನ ಕ್ಷೇತ್ರ (ತೇರದಾಳ)ಕ್ಕೆ ಕಳೆದ ಎರಡು ವರ್ಷದಿಂದ 10 ರೂ. ಕೊಟ್ಟಿಲ್ಲ. ಕೊಟ್ಟಿದ್ದರೆ ಸಚಿವರು ಹೇಳಲಿ ನೋಡೋಣ. ನಿರ್ಜೀವ ಅಧಿಕಾರಿಗಳನ್ನು ಇಟ್ಟುಕೊಂಡಿದ್ದೀರಿ. ನಿರ್ಲಕ್ಷ್ಯ ಕೆಲಸದಿಂದ ಜನರಿಗೆ ನೀರು ಕೊಡುವುದಾದರೂ ಹೇಗೆ? ಅನುದಾನ ಲಭ್ಯತೆ ನೋಡಿ ಕೆಲಸ ಎಂದರೆ ಹೇಗೆ? ಅನುದಾನ ಲಭ್ಯವಾಗುವುದು ಯಾವಾಗ? ನಿರ್ಲಿಪ್ತ ಅಧಿಕಾರಿಗಳಿಂದ ಕೆಲಸ ಆಗುತ್ತಿಲ್ಲ, ಹಾರಿಕೆ ಉತ್ತರ ಅಗತ್ಯವಿಲ್ಲ’ ಎಂದು ಚರ್ಚೆ ವೇಳೆ ಸಿದ್ದು ಸವದಿ ಸಚಿವರ ವಿರುದ್ಧ ಹರಿಹಾಯ್ದರು.

ಸಚಿವರು ಕೆರೆಗಳ ಕಾಮಗಾರಿಗಿರುವ ಅಡೆತಡೆ ಕುರಿತು ವಿಷಯ ಪ್ರಸ್ತಾಪಿಸಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಸಿದ್ದು ಸವದಿ ಇರಲಿಲ್ಲ. ಒಂದು ಹಂತದಲ್ಲಿ ಕಸಿವಿಸಿಗೊಂಡ ಸಚಿವರು, ನೀವು ಈ ತರಹ ಮಾಡಿದರೆ ಕಷ್ಟ. ನಾನೇನು ಮಾಡಲಾಗಲ್ಲ ಎಂದುಬಿಟ್ಟರು.

ಕೊನೆಗೂ ಸಚಿವರ ಉತ್ತರಕ್ಕೆ ಸಿದ್ದು ಸವದಿ ಸಮಾಧಾನಿತರಾಗಲಿಲ್ಲ. ಕೆರೆಯಲ್ಲಿ ನೀರು ನಿಲ್ಲಿಸುವುದು ನನ್ನ ಕೆಲಸವಲ್ಲ, ಅದರ ಬಗ್ಗೆ ಯೋಚನೆ ಮಾಡಬೇಕಾದವರು ಇಂಜಿನಿಯರ್ ಆದವವರ ಕೆಲಸ. ಅಂಥ ನಿರ್ಲಿಪ್ತರನ್ನು ಇಟ್ಟುಕೊಂಡಿದ್ದೀರಿ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಭೂಸ್ವಾಧೀನ ಸಮಸ್ಯೆ ಬಗ್ಗೆ ಹೇಳಿಕೊಂಡ ಸಚಿವರು, ಇದು ನಮ್ಮ ಇಲಾಖೆ ಅಸಡ್ಡೆಯೇ ಎಂದು ಕೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net