ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ಪ್ರಾಣಾಪಾಯದಿಂದ ಪಾರು

sandur gunshoot rape accused
Published on

ಬೆಂಗಳೂರು: ಭೂಗತ ಪಾತಕಿಯಾಗಿದ್ದ ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ(೩೫) ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ರಿಕ್ಕಿ ರೈಗೆ ಮೂಗು, ಕೈಗೆ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಡದಿಯ ಕರಿಯಪ್ಪನದೊಡ್ಡಿ ಬಳಿ ಇರುವ ಅವರ ನಿವಾಸದ ಮುಂದಿನ ರಸ್ತೆಯಲ್ಲಿ ಶುಕ್ರವಾರ ಮಧ್ಯರಾತ್ರಿ ೧ ಗಂಟೆಗೆ ಈ ಘಟನೆ ನಡೆದಿದೆ. ರಿಕ್ಕಿ ರೈ ತನ್ನ ಕಪ್ಪು ಬಣ್ಣದ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಬಸವರಾಜು ಹಾಗೂ ಗನ್‌ಮ್ಯಾನ್ ರಾಜ್‌ಪಾಲ್ ಜತೆಗೆ ಬಿಡದಿಯಿಂದ ಬೆಂಗಳೂರಿನ ಸದಾಶಿವನಗರದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮೂರು ಡಿವೈಎಸ್ಪಿಗಳ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಸುತ್ತು ಗುಂಡಿನ ದಾಳಿ:

ಮನೆಯ ಕಾಂಪೌಂಡ್ ಬಳಿಯೆ ಕಾದು ಕುಳಿತ್ತಿದ್ದ ದುಷ್ಕರ್ಮಿಗಳು ಎರಡು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ರಿಕ್ಕಿ ರೈ ಅವರನ್ನ ಗುರಿಯಾಗಿಸಿ ಗುಂಡು ಹಾರಿಸಲಾಗಿದೆ. ಡಬಲ್ ಬ್ಯಾರಕ್ ಗನ್‌ನಿಂದ ಫೈರಿಂಗ್ ಮಾಡಿರುವ ಸಾಧ್ಯತೆಯಿದ್ದು ಎರಡು ಗುಂಡುಗಳು ಚಾಲಕನ ಬದಿಯ ಡೋರ್ ಹಾಗೂ ಸೀಟ್ ಸೀಳಿಕೊಂಡು ಕಾರಿನ ಹಿಂಬದಿ ಸೀಟಿನ ಎಡಗಡೆ ಕುಳಿತ್ತಿದ್ದ ರಿಕ್ಕಿ ರೈ ಅವರ ಮೂಗು, ಬಲಗೈಗೆ ತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ಚಾಲಕ ಹಾಗೂ ಗನ್‌ಮ್ಯಾನ್ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ರಿಕ್ಕಿ ರೈ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹಿಂಬದಿ ಸೀಟ್‌ನಲ್ಲಿ ಕೂತಿದ್ದಕ್ಕೆ ಬಚಾವ್:

ದುಷ್ಕರ್ಮಿಗಳು ನೇರವಾಗಿ ರಿಕ್ಕಿ ರೈ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ರಿಕ್ಕಿ ರೈ ಅವರು ಇತ್ತೀಚೆಗೆ ಸ್ವತಃ ಕಾರನ್ನು ಚಾಲನೆ ಮಾಡಿಕೊಂಡು ಓಡಾಟ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ದುಷ್ಕರ್ಮಿಗಳು ಚಾಲಕ ಕೂತಿದ್ದ ಸೀಟಿನ ಕಡೆಗೆ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಘಟನೆ ನಡೆದ ಸಂದರ್ಭದಲ್ಲಿ ರಿಕ್ಕಿ ರೈ ಕಾರು ಚಾಲನೆ ಮಾಡದೆ ಹಿಂಬದಿ ಶೀಟ್‌ನಲ್ಲಿ ಕುಳಿತ್ತಿದ್ದರು. ಒಂದು ವೇಳೆ ಚಾಲನೆ ಮಾಡಿದ್ದರೆ ಗುಂಡುಗಳು ರಿಕ್ಕಿ ರೈ ಅವರ ದೇಹದ ಇತರೆ ಭಾಗಗಳಿಗೆ ತಾಕಿ ಪ್ರಾಣಕ್ಕೆ ಸಂಚಕಾರವಾಗುತಿತ್ತು.

ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ:

ವಿಷಯ ತಿಳಿಯುತ್ತಿದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಚಾಲಕನಿಂದ ಘಟನೆ ಬಗ್ಗೆ ವಿವರಣೆ ಪಡೆದುಕೊಂಡರು. ನಂತರ ಕೇಂದ್ರವಲಯ ಐಜಿಪಿ ಲಾಬೂರಾಮ್ ಅವರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಎಸ್.ಪಿ ಶ್ರೀನಿವಾಸ್ ಗೌಡ ಅವರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ನಾಲ್ವರ ವಿರುದ್ಧ ಎ್ಐಆರ್ ದಾಖಲು:

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಬಸವರಾಜು ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರಿನಲ್ಲಿ ಉದ್ಯಮಿ ರಾಕೇಶ್ ಮಲ್ಲಿ, ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್‌ನ ಮಾಲೀಕರಾದ ನಿತೇಶ್‌ಶೆಟ್ಟಿ ಮತ್ತು ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net