

ಫೈರೋಜಾಬಾದ್: ಕೋಟ್ಯಂತರ ಜನರು ಕಾತುರದಿಂದ ಕಾಯುತ್ತಿದ್ದ ದಿನ ಇಂದು (ಜನವರಿ 22) ನೆರವೇರಿದ್ದು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಸಂಪನ್ನಗೊಂಡಿದೆ. ದೇಶಾದ್ಯಂತ ಸಂಭ್ರಮ ಮನೆ ಮಾಡಿದ್ದು, ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸಿಹಿ ಹಂಚಿ ಸಂಭ್ರಮಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವೇ ಹುಟ್ಟಿದ ಮಗುವಿಗೆ ಇಲ್ಲಿನ ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರು ರಾಮ್ ರಹೀಂ ಎಂದು ಹೆಸರಿಡುವ ಮೂಲಕ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂದೇಶ ನೀಡಿದ್ದಾರೆ.
ಫರ್ಜಾನಾ ಎಂಬ ಮಹಿಳೆ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಇಬ್ಬರೂ ಚೆನ್ನಾಗಿದ್ದಾರೆ ಎಂದು ಜಿಲ್ಲಾ ಮಹಿಳಾ ಆಸ್ಪತ್ರೆಯ ಪ್ರಭಾರಿ ಡಾ.ನವೀನ್ ಜೈನ್ ಹೇಳಿದರು.
ಮಗುವಿನ ಅಜ್ಜಿ ಹುಸ್ನಾ ಬಾನು ಮಗುವಿಗೆ ರಾಮ್ ರಹೀಂ ಎಂದು ನಾಮಕರಣ ಮಾಡಿದ್ದಾರೆ. ಹಿಂದೂ ಮುಸ್ಲಿಂ ಏಕತೆಯ ಸಂದೇಶ ಸಾರಲೋಸುಗ ರಾಮ್ ರಹೀಂ ಎಂದು ಹೆಸರಿಟ್ಟಿದ್ದೇವೆ ಎಂದು ಮಗುವಿನ ಅಜ್ಜಿ ಬಾನು ತಿಳಿಸಿದ್ದಾರೆ.