ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಲೀಗ್ ಆಗಬಹುದು; ಶ್ರೀರಾಮ ಮಾತ್ರ ಆಗಲ್ಲ !

ctravi
Published on

ಬೆಂಗಳೂರು: ಶ್ರೀರಾಮಮಂದಿರ ನಿರ್ಮಾಣಕ್ಕೆ ಏನೇನು ಅಡೆತಡೆ ಒಡ್ಡಬೇಕೋ ಅದೆಲ್ಲವನ್ನೂ ಕಾಂಗ್ರೆಸ್ ಮಾಡಿತ್ತು ಎಂದು ಈಗ ಅನಿಸುತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಅವರು ವಿಶ್ಲೇಷಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಬುಧವಾರ ಮಾತನಾಡಿದ ಅವರು, ಕಪಿಲ್ ಸಿಬಲ್ ಮತ್ತಿತರರು ವಕೀಲರಾಗಿ ಶ್ರೀರಾಮ ಮಂದಿರದ ವಿರುದ್ಧ ವಕಾಲತ್ತು ಮಾಡಿದ್ದಾಗಿ ನಾವು ಹಿಂದೆ ಅಂದುಕೊಂಡಿದ್ದೆವು; ಅದಲ್ಲ ಎಂದು ಈಗ ಅನಿಸುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದ ನಿರ್ಣಯಕ್ಕೆ ಅನುಗುಣವಾಗಿಯೇ ಕಪಿಲ್ ಸಿಬಲ್ ಅವರಂಥ ವರಿಷ್ಠ ನೇತಾರರು ರಾಮಮಂದಿರ ನಿರ್ಮಾಣದ ವಿರುದ್ಧವಾಗಿ, ಬಾಬರಿ ಮಸೀದಿ ಕ್ರಿಯಾ ಸಮಿತಿ ಪರವಾಗಿ, ಸುನ್ನಿ ವಕ್ಫ್ ಬೋರ್ಡ್ ಪರವಾಗಿ ವಕಾಲತ್ತು ಮಾಡಿದ್ದಾಗಿ ಅನಿಸುತ್ತದೆ. ಹಾಗಾಗಿ ರಾಮನಿಗೂ ಅವರು ಬರಬೇಕೆಂದು ಇಚ್ಛೆ ಇಲ್ಲ. ಎಲ್ಲವೂ ರಾಮನಿಚ್ಛೆಯಂತೆ ನಡೆದಿದೆ ಎಂದು ತಿಳಿಸಿದರು.

ಮುಸ್ಲಿಮ್ ಲೀಗ್ ಗೆ ಬೆಂಬಲ

ಮುಸ್ಲಿಂ ಲೀಗ್ ಜೊತೆಗೂಡಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ಸರಕಾರ ಮಾಡಿತ್ತು. ಆರಂಭದಿಂದಲೂ ಮುಸ್ಲಿಂ ಲೀಗ್ ನಿಮಗೆ ಬೆಂಬಲ ಕೊಡುತ್ತ ಬಂದಿದೆ. ಮುಸ್ಲಿಂ ಲೀಗ್ ಆಗಬಹುದು; ಶ್ರೀರಾಮ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಆಗುವುದಿಲ್ಲ ಎಂದು ಟೀಕಿಸಿದರು.

1528ರಲ್ಲಿ ಬಾಬರನ ಸೇನಾಧಿಪತಿಯು ಮಂದಿರವನ್ನು ಧ್ವಂಸ ಮಾಡಿ ಒಂದು ಕಟ್ಟಡ ಕಟ್ಟಿಸಿದ್ದ. 1992ರಲ್ಲಿ ಆ ಕಳಂಕಿತ ಕಟ್ಟಡ ಕರಸೇವಕರ ಸಂಕಲ್ಪದಿಂದ ಧ್ವಂಸಗೊಂಡಿತು. ದೇಶದ ಉದ್ದಗಲಕ್ಕೆ 76ಕ್ಕೂ ಹೆಚ್ಚು ಯುದ್ಧಗಳು ರಾಮಮಂದಿರದ ನಿರ್ಮಾಣಕ್ಕಾಗಿಯೇ ನಡೆದಿತ್ತು ಎಂದು ವಿವರಿಸಿದರು.

ಶ್ರೀರಾಮನಿಗೂ ಕಾಂಗ್ರೆಸ್ಸಿನವರು ಬರುವುದು ಬೇಡ ಎಂದು ಇರಬಹುದು. ಅವನಿಚ್ಛೆಯಂತೇ ಎಲ್ಲವೂ ನಡೆಯುತ್ತದೆ. ಮಂದಿರ ನಿರ್ಮಾಣಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅಡೆತಡೆ ಒಡ್ಡಿದ ಈ ಜನ ಅಲ್ಲಿ ಬರುವುದು ಬೇಡ ಎಂದಿರಬಹುದು. ನಾವ್ಯಾವ ಮುಖ ಇಟ್ಟುಕೊಂಡು ಅಲ್ಲಿ ಹೋಗುವುದು ಎಂದು ಇವರಿಗೂ ಅನಿಸಿರಬಹುದು ಎಂದು ವಿಶ್ಲೇಷಿಸಿದರು.

ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದ ಮಹಾನುಭಾವರು ಕಾಂಗ್ರೆಸ್ಸಿಗರು. ಅಷ್ಟು ಮಾತ್ರ ಅಲ್ಲ; ಇವರ ಪಕ್ಷದ ಹಿರಿಯ ಮುಖಂಡರು ರಾಮ ಅಲ್ಲೇ ಹುಟ್ಟಿದ್ದಾನೆ ಎಂಬುದಕ್ಕೆ ಏನು ಸಾಕ್ಷಿ ಇದೆ ಎಂದು ಹೊರಗಡೆ ಪ್ರಶ್ನಿಸಿದ್ದಲ್ಲದೆ ನ್ಯಾಯಾಲಯದಲ್ಲಿ ಕೇಳಿದ್ದರು ಎಂದು ಸಿ.ಟಿ.ರವಿ ನೆನಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net