ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಬಿಜೆಪಿ ಜತೆಗಿದ್ದಾರೆ: ಪ್ರಧಾನಿ ಮೋದಿ

Narendra Modi
Published on

ವಿಪಕ್ಷ ನಾಯಕರು ಬಹುಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ

ಭೋಪಾಲ್​: 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ವಿಪಕ್ಷಗಳು ತಂತ್ರ ಹೆಣೆಯುತ್ತಿದ್ದು, ಈ ನಿಟ್ಟಿನಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದೆ. ಇನ್ನು ವಿಪಕ್ಷಗಳ ಒಗ್ಗಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದು, ಇತ್ತೀಚಿನ ದಿನಗಳಲ್ಲಿ ಗ್ಯಾರಂಟಿ ಎಂಬ ಹೊಸ ಪದವನ್ನು ಜನಪ್ರಿಯಗೊಳಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಮೇರಾ ಬೂತ್, ಸಬ್ಸೆ ಮಜ್‌ಬೂತ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಬಿಜೆಪಿ ಎಂದಿಗೂ ತುಷ್ಟೀಕರಣ ಹಾಗೂ ವೋಟ್​ ಬ್ಯಾಂಕ್​ ರಾಜಕಾರಣವನ್ನು ಮಾಡುವುದಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್​ ಕೊಟ್ಟಿದ್ದಾರೆ. ಒಂದು ವೇಳೆ ವಿಪಕ್ಷಗಳು ಅಧಿಕಾರಕ್ಕೆ ಬಂದರೆ ದೇಶದಲ್ಲಿ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಹಗರಣವಾಗುವುದಂತು ಸತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಪರವಾಗಿ ಇದ್ದಾರೆ

ತ್ರಿವಳಿ​ ತಲಾಖ್​ ಕಾನೂನನ್ನು ಇಸ್ಲಾಂನಿಮದ ಬೇರ್ಪಡಿಸಲು ಸಾಧ್ಯವಾಗದಿದ್ದರೆ ಈಜಿಪ್ಟ್​, ಇಂಡೋನೇಷ್ಯಾ, ಸಿರಿಯಾ, ಕತಾರ್​, ಜೋರ್ಡಾನ್​, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ಬಹುಸಂಖ್ಯಾತ ಮುಸ್ಲಿಮರು ಇರುವ ದೇಶದ್ಲ್ಲಿ ಏಕೆ ಆಚರಿಸುತ್ತಿಲ್ಲ. ಶೇ 90ರಷ್ಟು ಸುನ್ನಿ ಮುಸ್ಲಿಮರ ಜನಸಂಖ್ಯೆ ಹೊಂದಿರುವ ಈಜಿಪ್ಟ್​ನಲ್ಲಿ 80-90 ವರ್ಷಗಳ ಹಿಂದೆಯೇ ತ್ರಿವಳಿ ತಲಾಖ್​ಅನ್ನು ನಿಷೇಧಿಸಲಾಗಿದೆ. ​

ವೋಟ್​ ಬ್ಯಾಂಕ್​ ರಾಜಕಾರಣಕ್ಕೋಸ್ಕರ ತ್ರಿವಳಿ ತಲಾಖ್​ಅನ್ನು ಪ್ರತಿಪಾದಿಸುವವರು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಘೋರ ಅನ್ಯಾಯ ಮಾಡುತ್ತಿದ್ಧಾರೆ. ತ್ರಿವಳಿ ತಲಾಖ್ ನಿಷೇಧದ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಬಿಜೆಪಿ ಪರ ನಿಲ್ಲುತ್ತಾರೆ ಎಂದು ಹೇಳಿದ್ಧಾರೆ.

ನಾವು ಗ್ಯಾರಂಟಿ ಕೊಡುತ್ತೇವೆ

ಕಾಂಗ್ರೆಸ್​ ಪಕ್ಷ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಘೋಷಿಸಿರುವ ಗ್ಯಾರಂಟಿಗಳನ್ನು ಗುರಿಯಾಗಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶದಲ್ಲಿ ಬಹು ಕೋಟಿ ಹಗರಣದಲ್ಲಿ ವಿಪಕ್ಷಗಳು ಭಾಗಿಯಾಗಿವೆ. ಬದಲಾಗಿ ನಾವು ಅವರು ಮಾಡಿದ ಹಗರಣಗಳ ತನಿಖೆಗೆ ಆದೇಶಿಸುತ್ತೇವೆ ಎಂಬ ಗ್ಯಾರಂಟಿ ಕೊಡುತ್ತೇನೆ ಎಂದು ಹರಿಹಾಯ್ದಿದ್ಧಾರೆ.

ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್​ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದ್ದು, ಪ್ರಚಾರ ಕಾರ್ಯಕ್ರಮಗಳಲ್ಲಿ ಉಭಯ ಪಕ್ಷದ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net