

ಬಾಗಲಕೋಟೆ: ಬಿ.ಎಸ್. ಯಡಿಯೂರಪ್ಪ ಅವರ ಬಳಿ ಸಹಾಯ ಪಡೆದುಕೊಂಡವರು ಅತೃಪ್ತ ಟೀಮ್ನವರ ಆರೋಪಕ್ಕೆ, ಹಿರಿಯ ನಾಯಕರು ಏನೂ ಮಾತಾಡ್ತಿಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೇಸರ ವಿಚಾರಕ್ಕೆ ಬಿಜೆಪಿ (BJP) ರಾಜ್ಯ ಉಪಾಧ್ಯಕ್ಷ ಮುರಗೇಶ್ ನಿರಾಣಿ ಪ್ರತಿಕ್ರಿಯಿಸಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಅವರು, "ತಂದೆಯವರ ಬಗ್ಗೆ ಲಾಭ ಪಡೆದುಕೊಂಡವರು ಅನ್ನೋದು ಅಲ್ಲ. ಈಗ ನನಗೆ ಬೀಳಗಿ ಜನತೆ ನನಗೆ ಆಶೀರ್ವಾದವನ್ನೂ ಮಾಡಿದ್ದಾರೆ, ಆರಿಸಿಯೂ ತಂದಿದ್ದಾರೆ, ಮನೆಯಲ್ಲೂ ಕೂರಿಸಿದ್ದಾರೆ. ಅದೇ ತರಹ ನನ್ನ ಮಗ ಬಂದಾನ ಅಂದ್ರೆ, ಮಗನ ಕೊಡುಗೆ ಏನು ಅನ್ನೋದು ಬೇಕಲ್ಲ? ವಿಜಯೇಂದ್ರ ಯುವಕ ಇದ್ದಾನೆ, ಚೆನ್ನಾಗಿ ಕೆಲಸ ಮಾಡ್ತಿದ್ದಾನೆ. ಹಿರಿಯರ ಅಭಿಪ್ರಾಯ ಮಾರ್ಗದರ್ಶನ ತಗೊಳ್ಳೋದ್ರಲ್ಲಿ ಕೆಲವೊಂದಿಷ್ಟು ಕಡೆ ಎಡವಿರಬಹುದು" ಎಂದರು.
"50 ವರ್ಷಗಳ ಯಡಿಯೂರಪ್ಪ ಅವರ ಹೋರಾಟ ಹಾಗೂ ಸಂಘಟನೆಯಲ್ಲಿ ಅನುಭವ ಪಡೆದವನಿದ್ದಾನೆ. ಅವನೂ ಸಹ ಇನ್ನೂ ಹೆಚ್ಚು ಶಕ್ತಿ ಹಾಕಿ, ಅಸಮಾಧಾನಿತರನ್ನು ಮನವೊಲಿಸುವ ಕಡೆ ಗಮನ ಹರಿಸಬೇಕು. ತಟಸ್ಥ ಗುಂಪಿದೆ, ಅವರ ಜತೆ ಒನ್ ಟೂ ಒನ್ ಮಾತಾಡಬೇಕು. ತಂದೆಯವರ ಕಡೆ ಸಹಾಯ ತಗೊಂಡಾರ ಅಂದ್ರೆ, ಅವರು ಮತ್ತೊಂದು ಬೇರೆ ಮಾತಾಡ್ತಾರೆ. ಆ ಮಾತು ವಾದ-ವಿವಾದಕ್ಕೆ ಆಸ್ಪದ ಆಗಬಾರದು. ಈ ಅಸಮಾನಧಾನವನ್ನು ಮುಂದುವರಿಸದೇ, ನಾಲ್ಕು ಗೋಡೆಯ ಮಧ್ಯೆ ಅದನ್ನು ಸರಿ ಮಾಡಿಕೊಳ್ಳಬೇಕು" ಎಂದು ಸಲಹೆ ನೀಡಿದರು.
"ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಪಕ್ಷಕ್ಕೆ ಜೀವ ಕೊಟ್ಟವರು ಇದ್ದಾರೆ. ಅವರಿಗೆಲ್ಲ ಈ ಬೆಳವಣಿಗೆ ಅನ್ಯಾಯ ಆಗ್ತಿದೆ. ಲಕ್ಷಾಂತರ ಕಾರ್ಯಕರ್ತರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಸರಿಪಡಿಸಿಕೊಳ್ಳಬೇಕು. ಎರಡು ಕಡೆಯವರಿಗೂ ಬುದ್ದಿ ಹೇಳುವಂತ ದೊಡ್ಡವ ನಾನಲ್ಲ. ಇವತ್ತು ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ. ಅವರಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಅದರ ವಿರುದ್ಧ ಹೋರಾಟ ಮಾಡಲು ಅವಕಾಶವಿದೆ. ಅದನ್ನು ಬಿಟ್ಟು ನಾವು ಬಡಿದಾಡುತ್ತ ಕೂತರೆ ಕಾಂಗ್ರೆಸ್ನವರಿಗೆ ಕೇಳೋರು ಯಾರು ಇಲ್ಲವಾಗುತ್ತೆ" ಎಂದರು.
"ಹೊಸ ರಾಜ್ಯಾಧ್ಯಕ್ಷ ಬದಲಾವಣೆ ಆಗ್ತಿರೋದು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಬದಲಾವಣೆಯಾಗ್ತಿದೆ. ನಮ್ಮಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಮಂಡಲ ಅಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಬದಲಾವಣೆ ಆಗುತ್ತದೆ. ಎಲ್ಲರೂ ಒಪ್ಪಿಗೆ ಕೊಟ್ಟರೆ ಎರಡನೇ ಅವಧಿಗೂ ಅವರು ಮುಂದುವರೆಯಬಹುದು. ಇವತ್ತು ನಡ್ಡಾಜಿ ಅವರು ಬದಲಾವಣೆಗೊಳ್ಳುತ್ತಿದ್ದಾರೆ, ಅದೇ ರೀತಿ ಬದಲಾವಣೆ ಆಗೋದು ಸಹಜ. ಈಗ ಒಂದನೇಯ ಅವಧಿಗೆ ವಿಜಯೇಂದ್ರ ಆಗಿದ್ದಾರೆ. ಎರಡನೇಯ ಅವಧಿಗೂ ಅವರೇ ಆಗಬೇಕು ಎಂಬ ವಿನಂತಿಯಿದೆ" ಎಂದರು.
"ಈ ವಿಚಾರದಲ್ಲಿ ವಿಜಯೇಂದ್ರರನ್ನು ಮಾಡಬಾರದು. ಅವರ ಬದಲಿಗೆ ಬೇರೆಯವರನ್ನು ರಾಜ್ಯಾಧ್ಯಕ್ಷರಾಗಿ ಮಾಡಬೇಕು ಎಂದು ಒಂದು ಟೀಮ್ ಓಪನ್ ಆಗಿ ಹೇಳ್ತಿದೆ. ಕರ್ನಾಟಕದಲ್ಲಿ ಏನು ನಡಿತಿದೆ ಅಂತಾ ನಮ್ಮ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ. ಬೇರೆ ಬೇರೆ ರಾಜ್ಯದಲ್ಲೂ ಏನೇನು ಬದಲಾವಣೆ ಆಗ್ತಿದೆ ಎಂಬುದನ್ನೂ ಗಮನಿಸುತ್ತಿದ್ದಾರೆ. ಈಗ ಕೇಂದ್ರದಲ್ಲಿ ಬಜೆಟ್ ಸೆಷನ್ ನಡಿತಿದೆ ಮತ್ತು ದೆಹಲಿ ರಿಸಲ್ಟ್ ನೋಡಿಕೊಂಡು ಫೆ.10ರ ಬಳಿಕ ಎರಡೂ ಗುಂಪಿಗೂ ಅನ್ಯಾಯ ಆಗದಂತೆ, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲಿದ್ದಾರೆ ಅನ್ನೋದು ನನ್ನ ವಿಶ್ವಾಸ. ಹೈಕಮಾಂಡ್ ತಮ್ಮದೇ ಆದ ರಾಜಕೀಯ ಅನುಭವದ ಮೇಲೆ ಸೂಕ್ತ ನಿರ್ಧಾರ ತಗೆದುಕೊಳ್ಳುತ್ತದೆ" ಎಂದು ಹೇಳಿದರು.