ಕಿಲ್ಲರ್​ ಪತ್ನಿಯರು.. ಇತ್ತೀಚಿನ ಈ 3 ಪ್ರಕರಣಗಳಲ್ಲಿ ಕೊಲೆಗಳ ಮಾದರಿ ಬಹುತೇಕ ಒಂದೇ, ಇದು ಮೋಹದ ಬಲೆ! Killer Wives

Killer Wives
Published on

Killer Wives : ಮೀರತ್​ನ ಸೌರಭ್ ಕೊಲೆ ಪ್ರಕರಣದ ಜೊತೆಗೆ, ಔರೈಯಾ ಮತ್ತು ಬೆಂಗಳೂರಿನಲ್ಲಿ ನಡೆದ ಕೊಲೆಗಳು ಸಹ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿವೆ. ಈ ಮೂರು ಪ್ರಕರಣಗಳಲ್ಲಿನ ಕೊಲೆಗಳ ಮಾದರಿ ಬಹುತೇಕ ಒಂದೇ ರೀತಿ ಇರುವುದು ಆಘಾತಕಾರಿ ಸಂಗತಿಯಾಗಿದೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ಸೌರಭ್‌ ಕೊಲೆಯಾಯಿತು. ಆತನ ಪತ್ನಿ ಮುಸ್ಕಾನ್ ಮತ್ತು ಪ್ರಿಯಕರ ಸಾಹಿಲ್​, ಸೌರಭ್​ನನ್ನು ಕೊಲೆ ಮಾಡಿದ್ದಾರೆ. ಅದೇ ರೀತಿ, ಉತ್ತರ ಪ್ರದೇಶದ ಔರೈಯಾದಲ್ಲಿ ಪ್ರಗತಿ ತನ್ನ ಮದುವೆಯಾದ ಕೇವಲ 15 ದಿನಗಳಲ್ಲಿ ಪತಿ ದಿಲೀಪ್‌ನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆಯೂ ಇದೇ ರೀತಿ ಇದೆ. ಇದರ ಬಗ್ಗೆ ಆಸಕ್ತಿದಾಯಕ ವಿಷಯವೆಂದರೆ ಇದರಲ್ಲಿ ಎರಡು ಪ್ರೇಮ ವಿವಾಹಗಳು. ಮೂರು ಕೊಲೆಗಳ ಕತೆಯನ್ನು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.

ಒಬ್ಬ ಮಹಿಳೆ ತನ್ನ ಗೆಳೆಯನ ಸಹಾಯದಿಂದ ತನ್ನ ಗಂಡನನ್ನು ಕ್ರೂರವಾಗಿ ಕೊಲೆ ಮಾಡಿದಳು. ನಂತರ, ಅವರಿಬ್ಬರೂ ದೇಹವನ್ನು ತುಂಡುಗಳಾಗಿ ಕತ್ತರಿಸಿದರು. 15 ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಬಚ್ಚಿಟ್ಟು ಸಿಮೆಂಟ್‌ನಿಂದ ಮುಚ್ಚಿದರು. 20 ದಿನಗಳ ಹಿಂದೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಸೌರಭ್ ರಜಪೂತ್ (29) ಮತ್ತು ಮುಸ್ಕಾನ್ (27) 2016 ರಲ್ಲಿ ಪ್ರೇಮ ವಿವಾಹವಾದರು. ಸೌರಭ್, ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗೆ 2019ರಲ್ಲಿ ಒಂದು ಹೆಣ್ಣು ಮಗು ಜನಿಸಿತು. ಇದರ ನಡುವೆ ಮುಸ್ಕಾನ್​ಗೆ ಸಾಹಿಲ್ (25) ಜೊತೆ ವಿವಾಹೇತರ ಸಂಬಂಧ ಬೆಳೆಯಿತು. ಸೌರಭ್ ತನ್ನ ಕೆಲಸವನ್ನು ಬಿಟ್ಟು ಬೇಕರಿಯಲ್ಲಿ ಕೆಲಸ ಮಾಡಲು ಲಂಡನ್‌ಗೆ ಹೋಗಿದ್ದ. ಕಳೆದ ತಿಂಗಳು ಫೆ. 24ರಂದು ಪತ್ನಿಯ ಹುಟ್ಟುಹಬ್ಬಕ್ಕೆ ಲಂಡನ್‌ನಿಂದ ಹಿಂತಿರುಗಿದ್ದ. ಈ ತಿಂಗಳ 4ರಂದು ಸೌರಭ್​ನನ್ನು ಮುಸ್ಕಾನ್​ ಮತ್ತು ಸಾಹಿಲ್​ ಸೇರಿ ಕೊಲೆ ಮಾಡಿದ್ದಾರೆ. ಸೌರಭ್ ಕಾಣೆಯಾದ ನಂತರ ಅವನ ಪೋಷಕರು ಪೊಲೀಸರನ್ನು ಸಂಪರ್ಕಿಸಿದಾಗ ಕೊಲೆ ಬೆಳಕಿಗೆ ಬಂದಿದೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆಯಾದ 15 ದಿನಗಳಲ್ಲೇ ಗಂಡನನ್ನು ಕೊಲ್ಲಿಸಿದ ಪತ್ನಿ

ಪೊಲೀಸ್ ವರದಿಯ ಪ್ರಕಾರ, ಮಾರ್ಚ್ 19ರಂದು, ಸಹಾರಾ ಪೊಲೀಸ್ ಠಾಣೆಗೆ ಒಂದು ಕರೆ ಬಂತು. ಒಬ್ಬ ವ್ಯಕ್ತಿ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ತಲುಪಿದ ಪೊಲೀಸರು ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟ. ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಪೊಲೀಸ್ ತನಿಖೆಯ ಸಮಯದಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು. ಮೃತನ ಪತ್ನಿ ಮತ್ತು ಆಕೆಯ ಗೆಳೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಕಂಡುಕೊಂಡರು. ಮೃತ ದಿಲೀಪ್ ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 5ರಂದು ಪ್ರಗತಿ ಎಂಬ ಯುವತಿಯನ್ನು ವಿವಾಹವಾಗಿದ್ದ. ಆದಾಗ್ಯೂ, ಪ್ರಗತಿ ಅದೇ ಗ್ರಾಮದ ಅನುರಾಗ್ ಯಾದವ್ ಜೊತೆ ಸಂಬಂಧ ಹೊಂದಿದ್ದಳು. ಅಲ್ಲದೆ, ಈ ಮದುವೆಯೂ ಅವಳ ಇಚ್ಛೆಗೆ ವಿರುದ್ಧವಾಗಿ ನಡೆದಿತ್ತು. ದಿಲೀಪ್ ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದಾನೆ ಎಂದು ನಂಬಿದ ಪತ್ನಿ ಪ್ರಗತಿ, ತನ್ನ ಗೆಳೆಯನೊಂದಿಗೆ ಸೇರಿ ತನ್ನ ಗಂಡನನ್ನು ತೊಡೆದುಹಾಕಲು ಸಂಚು ರೂಪಿಸಿದಳು. ತನ್ನ ಗಂಡನನ್ನು ಕೊಲ್ಲಲು ಬಬ್ಲು ಯಾದವ್ ಎಂಬ ವ್ಯಕ್ತಿಗೆ 2 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಳು. ಆತ, ದಿಲೀಪ್‌ ಮೇಲೆ ಹಲ್ಲೆ ನಡೆಸಿ, ಗುಂಡಿಕ್ಕಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಸುಪಾತಿ ಹಂತಕ, ಮೃತನ ಪತ್ನಿ ಮತ್ತು ಆಕೆಯ ಗೆಳೆಯನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅವರ ಪತ್ನಿ ಮತ್ತು ಅತ್ತೆ ಒಟ್ಟಿಗೆ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ (37) ಅವರ ವಿವಾಹೇತರ ಸಂಬಂಧಗಳು ಮತ್ತು ಅಕ್ರಮ ವ್ಯವಹಾರಗಳು ಈ ಕೊಲೆಗೆ ಕಾರಣವಾಗಿವೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಪೊಲೀಸ್ ವರದಿಯ ಪ್ರಕಾರ, ಲೋಕನಾಥ್ ಸಿಂಗ್ ಅವರ ಪತ್ನಿ ಯಶಸ್ವಿನಿಗೆ, ಗಂಡನ ವಿವಾಹೇತರ ಸಂಬಂಧಗಳು ಮತ್ತು ಅಕ್ರಮ ವ್ಯವಹಾರಗಳ ಬಗ್ಗೆ ಗೊತ್ತಿತ್ತು. ಹೀಗಾಗಿ ಆತನನ್ನು ಕೊಲ್ಲಲು ಯೋಜನೆ ರೂಪಿಸಿದಳು. ಮೊದಲು, ಅವನಿಗೆ ನಿದ್ರೆ ಮಾತ್ರೆಗಳನ್ನು ಬೆರೆಸಿದ ಆಹಾರವನ್ನು ನೀಡಿ, ಆತ ಅಮಲಿನಲ್ಲಿದ್ದಾಗ ಕಾರಿನಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲ್ಲಲಾಗಿದೆ. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಲೋಕನಾಥ್ ಮತ್ತು ಯಶಸ್ವಿನಿ ಕಳೆದ ಡಿಸೆಂಬರ್‌ನಲ್ಲಿ ಕುಣಿಗಲ್‌ನಲ್ಲಿ ವಿವಾಹವಾದರು. ಅವರ ನಡುವಿನ ವಯಸ್ಸಿನ ವ್ಯತ್ಯಾಸದಿಂದಾಗಿ ಲೋಕನಾಥ್ ಅವರ ಕುಟುಂಬ ಸದಸ್ಯರು ಮದುವೆಯನ್ನು ವಿರೋಧಿಸಿದರು. ಆದಾಗ್ಯೂ, ಆತ ಮದುವೆಯಾದ. ಈ ವಿಚಾರ ಅವರ ಮನೆಯವರಿಗೆ ಗೊತ್ತಿರಲಿಲ್ಲ. ಇತ್ತ ಕೆಲವೇ ದಿನಗಳಲ್ಲಿ ಲೋಕನಾಥ್ ತನ್ನ ಹೆಂಡತಿಯನ್ನು ಅವಳ ಹೆತ್ತವರ ಮನೆಯಲ್ಲಿ ಬಿಟ್ಟು ಬಂದಿದ್ದ. ಎರಡು ವಾರಗಳ ಹಿಂದೆಯೇ ಅವರ ಕುಟುಂಬ ಸದಸ್ಯರಿಗೆ ಮದುವೆಯ ಬಗ್ಗೆ ತಿಳಿಯಿತು. ಅದೇ ಸಮಯದಲ್ಲಿ, ಯಶಸ್ವಿನಿಗೆ ತನ್ನ ಗಂಡನಿಗೆ ಹಲವಾರು ಮಹಿಳೆಯರೊಂದಿಗೆ ಸಂಬಂಧ ಇರುವುದು ಗೊತ್ತಾಯಿರು. ಹೀಗಾಗಿ ಯಶಸ್ವಿನಿ ತನ್ನ ತಾಯಿ ಜತೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net