

ಮುಂಬೈ: ಚಿಕನ್ ತಂದೂರಿ ಬಿಲ್ ಸೆಟಲ್ ಮಾಡುವ ವಿಚಾರವಾಗಿ ಶುರುವಾದ ಗಲಾಟೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಮುಲುಂಡ್ನಲ್ಲಿ ನಡೆದಿದೆ.
ಮೃತರನ್ನು ಅಕ್ಷಯ್ ವಾರ್ವೇಕರ್ (30) ಎಂದು ಗುರುತಿಸಲಾಗಿದ್ದು, ಇವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಇಮ್ರಾನ್ ಮಹಮೂದ್ ಖಾನ್ (27), ಸಲೀಂ ಮಹಮೂದ್ ಖಾನ್ (29), ಫಾರೂಕ್ ಗಫರ್ ಬಗ್ವಾನ್ (38), ನೌಶದ್ ಅಲಿ ಬಗ್ವಾನ್ (35), ಅಬ್ದುಲ್ ಬಗ್ವಾನ್ (40) ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರೆತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅಕ್ಷಯ್ ಹಾಗೂ ಆತನ ಸ್ನೇಹಿತ ಆಕಾಶ್ ಸಾಬ್ಲೆ ಥಾಣೆಯ ಕಿಸಾನ್ ನಗರದಲ್ಲಿರುವ ಇಮ್ರಾನ್ ಮಾಲೀಕತ್ವದ ಚಿಕನ್ ಅಂಗಡಿಗೆ ತೆರಳಿದ್ದಾರೆ. ಚಿಕನ್ ತಂದೂರಿ ಖರೀದಿಸಿ ಬಳಿಕ ಬಿಲ್ ವಿಚಾರವಾಗಿ ಇಬ್ಬರು ಅಂಗಡಿಯವರ ಜೊತೆ ಜಗಳವಾಡಿದ್ದಾರೆ. ಬಳಿಕ ವೈಶಾಲಿನಗರದಲ್ಲಿರುವ ಇಮ್ರಾನ್ ಸಹೋದರ ಸಲೀಂ ಅಂಗಡಿ ಬಳಿ ತೆರಳಿ ಅಲ್ಲಿಯೂ ಕೂಡ ಇದೇ ವಿಚಾರವಾಗಿ ಜಗಳವಾಡಿದ್ದಾರೆ. ಕೂಡಲೇ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಿ ಕಳಿಸಿದ್ದಾರೆ.
ರಾತ್ರಿ 9:30ರ ಸುಮಾರಿಗೆ ಇವರಿಬ್ಬರು ಇಮ್ರಾನ್ ಹಾಗೂ ಸಲೀಂ ಅಂಗಡಿ ಬಳಿ ಕಾಣಿಸಿಕೊಂಡಿದ್ದು, ಇದರಿಂದ ಕುಪಿತಗೊಂಡ ಆರೋಪಿಗಳು ಆಕಾಶ್ ಹಾಗೂ ಅಕ್ಷಯ್ ಮೇಲೆ ಚಾಕು ಹಾಗೂ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಅಕ್ಷಯ್ ಮೃತಟಪಟ್ಟಿದ್ದಾನೆ. ಆಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.