ತಾಯಿ, ಮಗನ ಕೊಲೆ; ತಂದೆ ಮೇಲೆ ಶಂಕೆ

murder
Published on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಾಯಿ, ಮಗನ ಜೋಡಿ ಕೊಲೆ ನಡೆದಿದ್ದು, ಪತಿಯೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

ಬಾಗಲಗುಂಟೆಯ ರವೀಂದ್ರನಗರ ನಿವಾಸಿ ನವನೀತಾ (33), ಈಕೆಯ ಪುತ್ರ ಸಾಯಿ ಸೃಜನ್(11) ಕೊಲೆಯಾದವರು. ಮಂಗಳವಾರ ಮಧ್ಯಾಹ್ನ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ನವನೀತಾಳ ಪತಿ ಕೆ.ಎನ್.ಚಂದ್ರ (38) ಕೃತ್ಯ ಎಸಗಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ನವನೀತಾ ಮತ್ತು ಚಂದ್ರ ದಂಪತಿಗೆ ಸಾಯಿ ಸೃಜನ್ ಮತ್ತು ಸಾಯಿ ಅಭಿಷೇಕ್ ಮಕ್ಕಳು. ಮದುವೆಯಾದ ಮೇಲೆ ಸ್ವಲ್ಪ ದಿನಗಳ ಕಾಲ ಆನಂತಪುರದಲ್ಲಿ ಇದ್ದು, ಚಂದ್ರ, ಪೇಟಿಂಗ್ ಕೆಲಸ ಮಾಡುತ್ತಿದ್ದ. ದಂಪತಿ ಟಿ.ದಾಸರಹಳ್ಳಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಸಾಯಿ ಅಭಿಷೇಕ್‌ನನ್ನು ಆಂಧ್ರಪ್ರದೇಶದಲ್ಲಿ ಶಾಲೆಗೆ ಸೇರಿಸಿ ಹಾಸ್ಟೆಲ್‌ನಲ್ಲಿ ಇರಿಸಿದ್ದರು. ಸಾಯಿ ಸೃಜನ್, ತಂದೆ-ತಾಯಿ ಜತೆ ನೆಲೆಸಿದ್ದ. ಮದ್ಯ ವ್ಯಸನಿಯಾದ ಚಂದ್ರ, ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ. ಇದರಿಂದ ನೊಂದ ನವನೀತಾ, ತನ್ನ ಪುತ್ರನೊಂದಿಗೆ ರವೀಂದ್ರನಗರಕ್ಕೆ ಬಂದ ಬಾಡಿಗೆ ಮನೆ ಮಾಡಿದ್ದಳು. ಟೆಲಿ ಕಾಲರ್ ಆಗಿ ನವನೀತಾ ಕೆಲಸ ಮಾಡುತ್ತಿದ್ದರೇ ಖಾಸಗಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ಸಾಯಿ ಸೃಜನ್ ಓದುತ್ತಿದ್ದ. ಅದೇ ಕಟ್ಟಡದಲ್ಲಿ ತಾಯಿ ಮತ್ತು ಸಹೋದರ ಇದ್ದ. ಅಲ್ಲಿಗೂ ಕುಡಿದು ಬಂದು ಚಂದ್ರ ಜಗಳ ಮಾಡುತ್ತಿದ್ದ.

ನಿನ್ನ ಮದುವೆಯಾಗಿ ನಾನು ಒಂಟಿಯಾಗಿ ಇರುವಂತೆ ಆಯಿತು. ನಿನ್ನ ಕೊಲೆ ಮಾಡಿದರೇ ಜೈಲಿನಲ್ಲಿ ಒಂಟಿಯಾಗಿ ಇರುತ್ತೆನೆ ಎಂದು ಬೆದರಿಕೆ ಒಡ್ಡುತ್ತಿದ್ದ. ಕುಡಿದ ಅಮಲಿನಲ್ಲಿ ಬೈಯುತ್ತಿದ್ದಾನೆ ಎಂದು ನವನೀತಾ ಮತ್ತು ಅವರ ತಾಯಿ ಸುಮ್ಮನಾಗುತ್ತಿದ್ದರು. ಇದರ ನಡುವೆ ನವನೀತಾ ಅವರ ತಾಯಿ ಲಕ್ಷ್ಮಿ, ಜಾಲಹಳ್ಳಿ ಶೆಟ್ಟಿಹಳ್ಳಿಯಲ್ಲಿನ ಏರ್‌ಪೋರ್ಸ್‌ನ ಕ್ವಾರ್ಟರ್ಸ್‌ಗೆ ಮನೆ ಸ್ಥಳಾಂತರ ಮಾಡಿದ್ದರು.

ಮಂಗಳವಾರ ಬೆಳಗ್ಗೆ ನವನೀತಾ ಮನೆಯಿಂದ ಅಡುಗೆ ಅನಿಲ ಲೀಕ್ ಆಗಿರುವುದನ್ನು ಗಮನಿಸಿ ಪಕ್ಕದ ಮನೆಯವರು ಎಚ್ಚರಿಸಲು ಹೋಗಿದ್ದಾರೆ.

ಮನೆ ಬೀಗ ಹಾಕಿರುವುದನ್ನು ಗಮನಿಸಿ ಬೆಡ್‌ರೂಮ್ ಕಿಟಕಿಯಿಂದ ಒಳಗೆ ನೋಡಿದಾಗ ಹಾಸಿಗೆ ಮೇಲೆ ತಾಯಿ, ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದೆ. ಗಾಬರಿಗೊಂಡ ಪಕ್ಕದ ಮನೆಯವರು, ನವನೀತಾ ಅವರ ತಾಯಿ ಮತ್ತು ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿದ್ದಾರೆ. ಮೃತಳ ತಾಯಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಟ್ಟಡ ಮಾಲೀಕರಿಂದ ಮತ್ತೊಂದು ಕೀ ಪಡೆದು ಬಾಗಿಲು ತೆಗೆದು ನೋಡಿದಾಗ ನವನೀತಾಳ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಸಾಯಿ ಸೃಜನ್‌ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಕಂಡುಬಂದಿದೆ.

ಈ ಸಂಬಂಧ ನವನೀತಾಳ ತಾಯಿ ಲಕ್ಷ್ಮಿ, ದೂರು ನೀಡಿದ್ದಾರೆ. ಪುತ್ರಿ ಮತ್ತು ಮೊಮ್ಮಗನನ್ನು ಅಳಿಯ ಚಂದ್ರನೇ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಇದರ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net