

ಲಖನೌ: ಇಂಜಿನಿಯರಿಂಗ್ ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಜಿ ಶಾಸಕನ ಪುತ್ರನನ್ನು ಬಂಧಿಸಿದ್ದಾರೆ.
ಲಖನೌದ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಮನ್ ಬಹದ್ದೂರ್ ಬಂಧಿತ. ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಶಾಂತ್ ಸಿಂಗ್ ಅವರನ್ನು ಗೋಮತಿ ನಗರದ ಅಪಾರ್ಟ್ಮೆಂಟ್ ಆವರಣದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಅಮನ್ ಬಹದ್ದೂರ್ ಅವರ ತಂದೆ ಮಾಜಿ ಶಾಸಕರು ಎಂದು ಪೊಲೀಸರು ತಿಳಿಸಿದ್ದಾರೆ.
ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಶಾಂತ್ ಸಿಂಗ್ ಅಲಕಾನಂದ ಅಪಾರ್ಟ್ಮೆಂಟ್ ಆವರಣವನ್ನು ಕಾರಿನಲ್ಲಿ ಪ್ರವೇಶಿಸುತ್ತಿದ್ದಂತೆ ಅಂದಾಜು 20ರಿಂದ 25 ಮಂದಿ ಯುವಕರು ಕಾರನ್ನು ಸುತ್ತುವರಿದರು. ಕಾರಿನ ಗಾಜು ಒಡೆದು ಪ್ರಶಾಂತ್ ಸಿಂಗ್ನನ್ನು ಹಲವು ಬಾರಿ ಇರಿದರು. ಪ್ರಶಾಂತ್ ತಪ್ಪಿಸಿಕೊಂಡು ಅಪಾರ್ಟ್ಮೆಂಟ್ ಕೊಠಡಿಗೆ ತೆರಳಲು ಮೆಟ್ಟಿಲು ಹತ್ತುತ್ತಿದ್ದ ವೇಳೆ ತೀವ್ರ ರಕ್ತಸ್ರಾವವಾಗಿ ಕುಸಿದು ಮೃತಪಟ್ಟರು. ಪ್ರಶಾಂತ್ ಸಿಂಗ್ ಇರಿತಕ್ಕೆ ಒಳಗಾಗಿ ಒದ್ದಾಡುತ್ತಾ ಸಾಯುವುದನ್ನು ನೋಡಿ ಹಲ್ಲೆ ನಡೆಸಿದ ಗುಂಪು ಚಪ್ಪಾಳೆ ತಟ್ಟಿ ಸಂತೋಷ ಪಡುತ್ತಿತ್ತು. ಇದನ್ನು ನೋಡಿದ ಅಪಾರ್ಟ್ಮೆಂಟ್ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬರುವಷ್ಟರಲ್ಲಿ ಹಲ್ಲೆ ನಡೆಸಿದ ಯುವಕರ ಗುಂಪು ಸ್ಥಳದಿಂದ ಪರಾರಿಯಾಯಿತು.
ಪೊಲೀಸರು ಅಪಾರ್ಟ್ಮೆಂಟ್ನಲ್ಲಿ ಅಳವಡಿಸಿದ್ದ ಸಿಸಿ ಟಿವಿಗಳ ದೃಶ್ಯ ಪರಿಶೀಲನೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ.
ಪ್ರಶಾಂತ್ಸಿಂಗ್ ಬುಧವಾರ ಪಾರ್ಟಿಯಲ್ಲಿ ಜಗಳ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)