ಕೊಲೆ ಆರೋಪಿಗೆ 60 ದಿನಗಳ ಪರೋಲ್: ತಾಯಿಗೆ ಆನಾರೋಗ್ಯದ ಹಿನ್ನೆಲೆ

Published on

ಬೆಂಗಳೂರು: ಶಿಕ್ಷೆ ಅಮಾನತುಗೊಳಿಸಲು ಅಥವಾ ಜಾಮೀನು ಕೋರಿ ಅಪರಾಧಿ ಅರ್ಜಿ ಸಲ್ಲಿಸದ ಕಾರಣ ಆತ ಪರೋಲ್ ಕೇಳಿದಾಗ ನಿರಾಕರಣೆ ಸಲ್ಲ ಎಂದಿರುವ ಹೈಕೋರ್ಟ್, ಕೊಲೆ ಆರೋಪಿಗೆ 60 ದಿನಗಳ ಪರೋಲ್ ಮಂಜೂರು ಮಾಡಿ ಆದೇಶಿಸಿದೆ.

ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ತನ್ನ ಮಗನನ್ನು ಪರೋಲ್ ಮೇಲೆ ಬಿಡುಗಡೆಗೆ ನಿರ್ದೇಶನ ನೀಡಬೇಕು ಎಂದು ಕೋರಿ 60 ವರ್ಷದ ಳ್ಳಾರಿ ಮೂಲದ ಈಶ್ವರಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಮಗನಿಗೆ ಪರೋಲ್ ಕೋರಿದ್ದ ಮನವಿಯ ಸಂಬಂಧ ಜೈಲು ಅಧಿಕಾರಿಗಳು ಸತ್ಯಸಂಗತಿ ತಿಳಿಯದೆ ಯಾಂತ್ರೀಕೃತ ವರದಿ ಪರಿಗಣಿಸಿ ತಿರಸ್ಕರಿಸಿದ್ದಾರೆ. ಅಪರಾಧಿಯ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬುವುದನ್ನು ಪರಿಗಣಿಸಿಯೇ ಇಲ್ಲ. ಇತ್ತೀಚೆಗೆ ಇದೇ ತೆರನಾದ ಹಲವು ಪ್ರಕರಣಗಳಲ್ಲಿ ಅಧಿಕಾರಿಗಳು ವಿವೇಚನೆ ಬಳಕೆ ಮಾಡದೆ ಒಂದೇ ರೀತಿಯಲ್ಲಿರುವ ವರದಿಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಪೀಠ ಅಸಮಾಧಾನ ಹೊರಹಾಕಿದೆ.

ಅಲ್ಲದೆ, ಅರ್ಜಿದಾರರ ಮಗ ಸಿದ್ದನಗೌಡ ಎಂಬುವರನ್ನು 60 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆಗೆ ಸೂಚನೆ ನೀಡಿದೆ. ಈ ಅವಧಿಯಲ್ಲಿ ವಾರಕ್ಕೆ ಒಂದು ಬಾರಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಹಿ ಹಾಕಬೇಕು ಮತ್ತು ಪರೋಲ್ ಅವಧಿಯ ಬಳಿಕ ಅಪರಾಧಿಯನ್ನು ಜೈಲಿಗೆ ವಾಪಸ್ ಕಳಿಸುವುದು ಸ್ಥಳೀಯ ಠಾಣಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಪೀಠ ನುಡಿದಿದೆ.

ಜತೆಗೆ, ಷರತ್ತುಗಳನ್ನು ಪೂರೈಸಿದ್ದ ನಂತರ ಪರೋಲ್ ವಿಸ್ತರಣೆಗೆ ಕೋರಿ ಅರ್ಜಿದಾರರ ಮಗ ಮನವಿ ಸಲ್ಲಿಸಬಹುದು ಎಂದು ಪೀಠ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net