

ಚನ್ನಪಟ್ಟಣ : ನೀರಿನ ಪೈಪ್‌ನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ ತಾಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇನ್ನೊಂದೆಡೆ ಪೊಲೀಸ್ ಇಲಾಖೆಗೆ ಸವಾಲಾಗಿದೆ.
ನಗರ ನ್ಯಾಯಾಲಯ ಹಿಂಭಾಗವಿರುವ ಜಲಮಂಡಳಿ ಓವರ್ ಹೆಡ್ ಟ್ಯಾಂಕ್ ಪೈಪ್‌ಲೈನ್ ವಾಲ್ವ್‌ನಲ್ಲಿ ಶನಿವಾರ ಮಹಿಳೆಯೊಬ್ಬರ ಕಾಲು ಪತ್ತೆಯಾಗಿತ್ತು.
ಟ್ಯಾಂಕ್ ಮೇಲ್ಭಾಗದಲ್ಲಿ ಮಹಿಳೆ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾಗಿದ್ದರಿಂದ ಯಾರೋ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆ ಕಾರ್ಯಾಚರಣೆ ವಾಡಿ ಹೊರತೆಗೆದಾಗ ಒಂದು ಕಾಲಿನ ಭಾಗ ಮಾತ್ರ ದೊರಕಿತ್ತು. ಮೃತದೇಹದ ಉಳಿದ ಭಾಗದ ಪತ್ತೆಗಾಗಿ ನಗರಸಭೆ, ಜಲಮಂಡಳಿ ಹಾಗೂ ಪೊಲೀಸರು ಜಂಟಿಯಾಗಿ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗದಿರುವುದು ಸಾಕಷ್ಟು ಗೊಂದಲ ಮೂಡಿಸಿದೆ.
ಹಲವು ದಿನದ ಹಿಂದೆಯೇ ಮಹಿಳೆ ಟ್ಯಾಂಕ್‌ಗೆ ಬಿದ್ದಿದ್ದು, ಶವ ಕೊಳೆತು ನೀರಿನ ಸೆಳೆತಕ್ಕೆ ಸಿಲುಕಿ ಛಿದ್ರಗೊಂಡಿದೆ ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ವಾಲ್ವ್‌ನಿಂದ ಹೊರತೆಗೆದ ಕಾಲಿನ ಭಾಗ ಜಾಸ್ತಿ ಕೊಳೆಯದಿರುವುದು ಹಾಗೂ ಯಾರೋ ದೇಹದಿಂದ ಬೇರ್ಪಡಿಸಿರುವ ರೀತಿಯಲ್ಲಿ ಗೋಚರಿಸುತ್ತಿರುವುದು ಅನುಮಾನ ಮೂಡಿಸಿದೆ. ಶನಿವಾರ ರಾತ್ರಿವರೆಗೂ ಪೈಪ್‌ನಲ್ಲಿ ದೇಹದ ಉಳಿದ ಭಾಗಗಳಿಗಾಗಿ ಶೋಧಿಸಿದರೂ ಸಣ್ಣ ತುಂಡೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಪ್ರಕರಣ ಸಾಕಷ್ಟು ಅನುವಾನಕ್ಕೆ ಕಾರಣವಾಗಿದೆ.
ಪರ್ಯಾಯ ವ್ಯವಸ್ಥೆ: ಓವರ್‌ಹೆಡ್ ಟ್ಯಾಂಕ್‌ನಲ್ಲಿ ಮಹಿಳೆಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಈ ಟ್ಯಾಂಕ್ ನೀರನ್ನು ಅವಲಂಭಿಸಿದ್ದ 9, 10, 11ನೇ ವಾರ್ಡ್‌ಗಳ ಜನರಿಗೆ, ಶಾಸಕ ಎಚ್.ಡಿ.
ಕುಮಾರಸ್ವಾಮಿ ಸೂಚನೆ ಮೇರೆಗೆ ನಗರ ನೀರು ಸರಬರಾಜು ಮಂಡಳಿ ಭಾನುವಾರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿತು.
ನಾನಾ ರೀತಿಯ ಚರ್ಚೆ : ಕೊಲೆ ಮಾಡಿ ಪ್ರಕರಣದ ದಾರಿ ತಪ್ಪಿಸುವ ಸಲುವಾಗಿ ಈ ರೀತಿ ತಂದು ಹಾಕಿದ್ದಾರೆಯೇ ಎಂಬ ಪ್ರಶ್ನೆ ಸೇರಿ ನಾನಾ ಚರ್ಚೆಗಳು ಹುಟ್ಟಿಕೊಂಡಿವೆ. ಈ ಟ್ಯಾಂಕ್ ನ್ಯಾಯಾಲಯ, ನ್ಯಾಯಾಧೀಶರ ವಸತಿಗೃಹ ಹಾಗೂ ಜನನಿಬಿಡ ಪ್ರದೇಶದಲ್ಲಿದ್ದು, ಈ ರೀತಿಯಾಗಿ ಮಾಡಿರಲು ಸಾಧ್ಯವೇ..?, ಆತ್ಮಹತ್ಯೆಯಾಗಿದ್ದರೆ ದೇಹದ ಉಳಿದ ಭಾಗವೆಲ್ಲಿ...ಎಂಬ ಅನುವಾನಗಳು ಗಿರಕಿ ಹೊಡೆಯುತ್ತಿದ್ದು, ಪ್ರಕರಣ ಪೊಲೀಸರಿಗೆ ಸವಾಲಾಗಿದೆ