ಮಹೇಶ್​ ಬಾಬು ಚಿತ್ರ ರಿ-ರಿಲೀಸ್​! ಕೈಮುಗಿತೀನಿ ಚಿತ್ರಮಂದಿರದಲ್ಲಿ ಇಂತಹ ಕೆಲಸ ಮಾಡ್ಬೇಡಿ: ನಿರ್ದೇಶಕ ವಂಶಿ ಗರಂ

ವಿಜಯವಾಣಿ - 2024-08-11T174835.228
Published on

ಆಂಧ್ರಪ್ರದೇಶ: ಟಾಲಿವುಡ್​ ಪ್ರಿನ್ಸ್ ಮಹೇಶ್ ಬಾಬು ಜನ್ಮದಿನ ಸಂಭ್ರಮದ ಹಿನ್ನಲೆ ಅವರು ಅಭಿನಯಿಸಿದ್ದ 2001ರ ಬ್ಲಾಕ್​ಬಸ್ಟರ್​ 'ಮುರಾರಿ' ಚಿತ್ರವನ್ನು ಇಂದು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲಾಯಿತು. ಇದು ಮಹೇಶ್ ಅಭಿಮಾನಿಗಳಿಗೆ ಭಾರೀ ಸಂತಸ ನೀಡಿದ್ದು, ಥಿಯೇಟರ್​ ತುಂಬ ಪ್ರೇಕ್ಷಕರಿಂದ ಸಂಭ್ರಮಾಚರಣೆ ನಡೆಯುತ್ತಿದೆ. ಎಲ್ಲೆಡೆ ಖುಷಿ ವಾತಾವರಣ ಕೂಡಿದ್ದರೆ, ಇತ್ತ ಚಿತ್ರದ ನಿರ್ದೇಶಕ ಕೃಷ್ಣ ವಂಶಿ ಮಾತ್ರ ಪ್ರಿನ್ಸ್​ ಫ್ಯಾನ್ಸ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಕಲ್ಟ್ ಕ್ಲಾಸಿಕ್​ 'ಮುರಾರಿ' ಸಿನಿಮಾ ರೀ-ರಿಲೀಸ್ ಆಗುತ್ತಿದೆ ಎಂಬ ಖುಷಿಯಲ್ಲಿ ಅಭಿಮಾನಿಗಳು ಚಿತ್ರಮಂದಿರಗಳನ್ನು ಆವರಿಸಿಕೊಂಡಿದ್ದು, ಕೇಕ್ ಕತ್ತರಿಸಿ, ನಟನ ಫೋಟೋಗಳಿಗೆ ಹಾಲಿನ ಅಭಿಷೇಕ ನೆರವೇರಿಸಿ, ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಒಂದೆರೆಡು ಥಿಯೇಟರ್​​ಗಳಲ್ಲಿ ಮಾತ್ರ ಅಹಿತಕರ ಘಟನೆಗಳು ನಡೆದಿವೆ. ಇದು ನಿರ್ದೇಶಕರ ಗಮನಕ್ಕೆ ಬಂದಿರುವುದೇ ಅವರ ಅತೀವ ಬೇಸರಕ್ಕೆ ಕಾರಣವಾಗಿದೆ. ಆ ವಿಡಿಯೋಗಳು ಇದೀಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಸಿನಿಮಾ ಬೆಳ್ಳಿ ಪರದೆಯ ಮೇಲೆ ಬರುತ್ತಿದ್ದಂತೆ ಯುವಕನೊಬ್ಬ ಯುವತಿಗೆ ತಾಳಿ ಕಟ್ಟಿದ್ದಾನೆ.  ಈ ಜೋಡಿ ಚಿತ್ರದ ಮಧ್ಯೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.. ಇನ್ನು ಅವರ ಸ್ನೇಹಿತರು ಅಕ್ಷತೆ ಕಾಳನ್ನು ಎಸೆದಾಡುವ ಮೂಲಕ ವಿಚಿತ್ರವಾಗಿ ಮದುವೆ ಮಾಡಿಸಿ, ಸಂಭ್ರಮಿಸಿದ್ದಾರೆ. ಈ ದೃಶ್ಯಗಳು ಪ್ರೇಕ್ಷಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮತ್ತೊಂದು ವಿಡಿಯೋದಲ್ಲಿ ಇಬ್ಬರು ವಯಸ್ಸಾದ ಜೋಡಿ ಪರಸ್ಪರ ತುಟಿಗೆ ಚುಂಬಿಸಿದ್ದಾರೆ. ಇದು ನೋಡುಗರಿಗೆ ಭಾರೀ ಮುಜುಗರ ಉಂಟುಮಾಡಿದ್ದು, ಇದು ನಿರ್ದೇಶಕ ವಂಶಿ ಅವರ ಗಮನಕ್ಕೆ ಬಂದಿದೆ. ಈ ಕುರಿತು ಚಿತ್ರದ ನಿರ್ದೇಶಕರು ಮಹೇಶ್ ಬಾಬು ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ.

"ಇದ್ಯಾವುದು ಸರಿಯಿಲ್ಲ. ನಮ್ಮ ಹಿಂದಿನ ತಲೆಮಾರಿನಿಂದ ಬಂದಿರುವಂತ ಸಂಸ್ಕೃತಿ, ಸಂಪ್ರದಾಯ, ಪದ್ಧತಿಗಳನ್ನು ಯಾವುದೇ ಕಾರಣಕ್ಕೂ ಈ ರೀತಿ ಹಾಳುಮಾಡಬೇಡಿ ಮತ್ತು ಅಗೌರವಿಸಬೇಡಿ. ನಿಮ್ಮಲ್ಲಿ ಮನವಿ ಮಾಡುತ್ತೇನೆ. ದಯವಿಟ್ಟು ಇಂತಹ ಕೆಲಸವನ್ನು ಮುಂದೆ ಮಾಡಬೇಡಿ, ಅರ್ಥ ಮಾಡಿಕೊಳ್ಳಿ. ಇದರಿಂದ ನೀವುಗಳು ಕೆಟ್ಟ ಉದಾಹರಣೆ ಸೃಷ್ಟಿ ಮಾಡುತ್ತಿದ್ದೀರಿ" ಎಂದು ಗರಂ ಆಗಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net