

ಕಿರುವಾರ ಎಸ್. ಸುದರ್ಶನ್ ಕೋಲಾರ
ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಬಿಟ್ಟುಕೊಟ್ಟಿದ್ದ ಮಾಜಿ ಸಂಸದ ಎಸ್.ಮುನಿಸ್ವಾಮಿ ಈಗ ಬಂಗಾರಪೇಟೆ ವಿಧಾನಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಬಿಸಿ ಚರ್ಚೆಯಾಗುತ್ತಿದೆ.
2018ರ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಎಸ್.ಮುನಿಸ್ವಾಮಿ ಜಯಗಳಿಸಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳ
ಮೈತ್ರಿಯಿಂದ ಕ್ಷೇತ್ರ ಜೆಡಿಎಸ್ ಪಾಲಾಯಿತು. ಇದಾದ ಬಳಿಕ ಮುನಿಸ್ವಾಮಿ ವಿಧಾನಸಭೆ ಸ್ಪರ್ಧಿಸುವ ಇಂಗಿತದೊಂದಿಗೆ ಬಂಗಾರಪೇಟೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಜಿಲ್ಲೆಯಲ್ಲಿ 6 ವಿಧಾನಸಭೆ ಕ್ಷೇತ್ರಗಳ ಪೈಕಿ ಮುಳಬಾಗಿಲು, ಬಂಗಾರಪೇಟೆ, ಕೆಜಿಎ್ ಮೀಸಲು ಹಾಗೂ ಕೋಲಾರ, ಮಾಲೂರು, ಶ್ರೀನಿವಾಸಪುರ ಸಾಮಾನ್ಯ ಕ್ಷೇತ್ರಗಳಾಗಿವೆ. ಮುನಿಸ್ವಾಮಿ ಯಾವ ಮೀಸಲು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಬೆಂಬಲಿಗರಲ್ಲಿ ಕುತೂಹಲ ಮೂಡಿಸಿತ್ತು.
ಅಂತೆಯೇ, 2024ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ಬಾಬು ಸಂಸದರಾಗಿದ್ದು, ಇದಕ್ಕೂ ಮೊದಲು ಅವರು ಬಂಗಾರಪೇಟೆ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈಗ ಆ ಸ್ಥಾನವನ್ನು ಭರ್ತಿ ಮಾಡಲು ಮುನಿಸ್ವಾಮಿ ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದು, ಬಿಜೆಪಿ ಸಂಟನೆ ಜತೆಗೆ, ಚುನಾವಣೆಗೆ ತಯಾರಿ ನಡೆಸುತ್ತಿದ್ದು, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಮುಂಬರುವ ಜಿಪಂ, ತಾಪಂ ಸೇರಿ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದಿಂದ ಬೆಂಬಲಿಗರನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಅಂತೆಯೇ, ಬುಧವಾರ ಹುಟ್ಟು ಹಬ್ಬದ ಅಂಗವಾಗಿ ಬಂಗಾರಪೇಟೆ ತಾಲೂಕು ವ್ಯಾಪ್ತಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಜತೆಗೆ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿರುವುದು, ಕಾರ್ಯಕರ್ತರು, ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ರಾಜಕೀಯ ಚಟುವಟಿಕೆ ಶುರು ಮಾಡಿರುವುದು ರಾಜಕೀಯ ವಲಯದಲ್ಲಿ ಹೊಸ ಗಾಳಿ ಬೀಸುವ ಮುಸ್ಸೂಚನೆ ಸಿಕ್ಕಂತಾಗಿದೆ.
* ಬಂಗಾರಪೇಟೆಯೇ ಏಕೆ?
ಬಂಗಾರಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ವಿರುದ್ಧ, ಹಾಲಿ ಸಂಸದ ಎಂ.ಮಲ್ಲೇಶ್ಬಾಬು ಅವರು ಜೆಡಿಎಸ್ನಿಂದ ಎರಡು ಚುನಾವಣೆಗಳಲ್ಲಿ ಪ್ರಬಲ ಪೈಪೋಟಿ ನೀಡಿ ಕೆಲವೇ ಮತಗಳಿಂದ ಪರಾಭವಗೊಂಡಿದ್ದರು. ಇಬ್ಬರ ನಡುವೆ ಬಿಜೆಪಿಯಿಂದ ಎಂ.ನಾರಾಯಣಸ್ವಾಮಿ ಸ್ಪರ್ಧಿಸಿದರೂ ಅಷ್ಟೇನು ಪೈಪೋಟಿ ನೀಡುತ್ತಿರಲಿಲ್ಲ. ಇದರಿಂದಾಗಿ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಪೈಪೋಟಿ ನೀಡಲು ಮುಂದಾಗಿದ್ದು, ಮೊದಲಿನಿಂದಲೂ ಎದುರಾಳಿ ಪಕ್ಷದವರ ವಿರುದ್ಧ ಪ್ರತಿಭಟಿಸುವುದು, ಹೇಳಿಕೆ ನೀಡುವ ಮೂಲಕ ತಿರುಗೇಟು ನೀಡುತ್ತಲೇ ಬರುತ್ತಿದ್ದಾರೆ. 2028ರ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯುವ ವಿಶ್ವಾಸದಲ್ಲಿರುವ ಮುನಿಸ್ವಾಮಿ ಸ್ಪರ್ಧೆಗೆ ಸಿದ್ಧರಿದ್ದಾರೆ ಎನ್ನಲಾಗಿದೆ.
* ಗುಂಪುಗಾರಿಕೆ ಎದುರಾಗುವ ಸಾಧ್ಯತೆ?
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಅವರು ಬಂಗಾರಪೇಟೆ ಕ್ಷೇತ್ರದಲ್ಲಿ ಪಕ್ಷ ಸಂಟಿಸುವ ಮೂಲಕ ಪ್ರಾಬಲ್ಯ ಇಟ್ಟುಕೊಂಡಿದ್ದಾರೆ. ಜತೆಗೆ ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್ ಸದ್ಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮುಂದಿನ ಚುನಾವಣೆಗೆ ಆಕಾಂಯಾಗಿದ್ದಾರೆ ಎಂಬ ಮಾತುಗಳು ಇವೆ. ಎಸ್.ಮುನಿಸ್ವಾಮಿ ಕ್ಷೇತ್ರ ಪ್ರವೇಶ ಮಾಡುತ್ತಿರುವುದರಿಂದ ಪಕ್ಷದಲ್ಲಿ ಗುಂಪುಗಾರಿಕೆ, ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಎದುರಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಅಂತೆಯೇ, ಲೋಕಸಭೆ ಚುನಾವಣೆ ಪ್ರಚಾರದ ವೇಳೆ, ತಾಲೂಕಿನ ಶಾಪೂರು ಗ್ರಾಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಭಾಷಣದ ವೇಳೆ ಮುನಿಸ್ವಾಮಿ ಬಂಗಾರಪೇಟೆ ಅಭ್ಯರ್ಥಿ ಎಂದು ಹೇಳಿದ್ದರು. ಇದಕ್ಕೆ ವೇದಿಕೆ ಮೇಲಿದ್ದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಸ್ವಾಮಿ, ಮಹೇಶ್ ಹಾಗೂ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.
ಕೋಟ್...
ಪಕ್ಷ ಸಂಟನೆ ವಿಚಾರದಲ್ಲಿ ಜಿಲ್ಲಾದ್ಯಂತ ಸಂಚಾರ ಮಾಡಲಾಗುತ್ತಿದೆ. ಕ್ಷೇತ್ರವನ್ನು ಚಿಕ್ಕಂದಿನಿಂದಲೂ ನೋಡಿದ್ದು, ಬಿಜೆಪಿ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಆದರೆ, ಬಂಗಾರಪೇಟೆ ಕ್ಷೇತ್ರದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ. ಕ್ಷೇತ್ರದ ಜನರಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸಲಾಗುತ್ತಿದೆ.
> ಎಸ್.ಮುನಿಸ್ವಾಮಿ, ಮಾಜಿ ಸಂಸದ, ಕೋಲಾರ