ತಹಸೀಲ್ದಾರ್​, ಗಣಿ ಅಧಿಕಾರಿ ವಿರುದ್ಧ ಸ್ವಯಂ ದೂರು ದಾಖಲು

klr upa loka,webp
Published on

ಕೋಲಾರ/ಟೇಕಲ್​

ಮಾಲೂರು ತಾಲೂಕಿನ ಟೇಕಲ್​ ಭಾಗದ ಕಲ್ಲು ಗಣಿ ಪ್ರದೇಶಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಗುರುವಾರ ದಿಢೀರ್​ ಭೇಟಿ ನೀಡಿ, ಪರಿಶೀಲಿಸಿದರು.

ಗಣಿ ಪ್ರದೇಶದಲ್ಲಿ ನಿಯಮಗಳು ಪಾಲನೆ ಮಾಡದೆ ಇರುವ ಬಗ್ಗೆ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ದೂರುಗಳ ಹಿನ್ನೆಲೆಯಲ್ಲಿ ಭೇಟಿ ಮಾಡಿದ್ದು, ಮಾಲೀಕರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಾಲೀಕರು ಅನುಮತಿ ಪಡೆದುಕೊಂಡಿರುವ ಪ್ರದೇಶಕ್ಕೂ ಹೆಚ್ಚು ಜಾಗದಲ್ಲಿ ಗಣಿ ಚಟುವಟಿಕೆ ನಡೆಸುತ್ತಿರುವುದು, ಕರೆ ಒತ್ತುವರಿ, ಅರಣ್ಯ ಜಾಗ ಒತ್ತುವರಿ, ಗೋಮಾಳ ಒತ್ತುವರಿ ಆಗಿದ್ದು, ತೆರವುಗೊಳಿಸಲು ಕ್ರಮಕೈಗೊಳ್ಳದೆ ವಿಳಂಬ ಮಾಡುತ್ತಿರುವ ಇಲಾಖಾಧಿಕಾರಿ, ಸಿಬ್ಬಂದಿಯ ಜನ್ಮ ಜಾಲಾಡಿದರು.

ಟೇಕಲ್​ ಗಣಿ ಪ್ರದೇಶಕ್ಕೆ ಉಪ ಲೋಕಾಯುಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಆಗಮಿಸುವಂತೆ ಸೂಚಿಸಲಾಯಿತು. ಆಗ ಕೆಳ ಹಂತದ ಅಧಿಕಾರಿ ಆಗಮಿಸಿದ್ದಕ್ಕೆ ಗರಂ ಆದರು, ಎಲ್ಲಿ ಇಲಾಖೆಯ ಮುಖ್ಯಸ್ಥರು ಎಂದು ಪ್ರಶ್ನಿಸಿದಾಗ ಕೋರ್ಟ್​ಗೆ ಹೋಗಿರುವುದಾಗಿ ಕೆಳ ಹಂತದ ಅಧಿಕಾರಿ ಉತ್ತರಿಸಿದಾಗ ಕೋರ್ಟ್​ ಹೋಗಿದ್ದಾರೊ, ಹೊಸದಾಗಿ ಬಂದಿರುವುದಾಗಿ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ, ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಕಡೆ ಭೇಟಿ ಮಾಡಲಾಗುತ್ತಿದೆ. ಕಾನೂನು ಒಳಗೆ ಇದ್ದರೆ ಬದುಕಬಹುದು. ಅದನ್ನು ಮೀರಿದರೆ ಪ್ರಕೃತಿಗೆ ಉತ್ತರ ಕೊಡಲಾಗುವುದಿಲ್ಲ. ಭ್ರಷ್ಟರನ್ನು ಬಿಡುವ ಪ್ರಶ್ನೆಯಿಲ್ಲ ಎಂದರು.

ಗಣಿಯಲ್ಲಿ ಕೆಲಸ ಮಾಡುವವರು ಮನುಷ್ಯರೆ, ರಾತ್ರಿ ವೇಳೆ ಕೆಲಸ ಮಾಡಲು ಎಲ್ಲಿ ಅವಕಾಶ ಇದೆ ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇನೆ. ತಾಲೂಕುಗಳು ಆದ ಮೇಲೆ ಪಂಚಾಯಿತಿ ಕಚೇರಿಗಳಿಗೂ ನುಗ್ಗುತ್ತೇನೆ. ಗೋಮಾಳ ಒತ್ತುವರಿಯಾಗಿದ್ದು ಗೋವುಗಳಿಗೆ ಮೇವು ಇಲ್ಲವಾಗಿದೆ. ಕೋಲಾರ ನನ್ನ ಪುಣ್ಯ ಭೂಮಿ ಅಂತ ಬಂದಿದ್ದೇನೆ, ಕೆರೆಯ ಮಧ್ಯದಲ್ಲಿ ರಸ್ತೆ ಹಾಕಿದ್ದಾರೆ. ಗಣಿ, ಕ್ರಷರ್​ ಮಾಲೀಕರು ಕಾನೂನು ಬದ್ಧವಾಗಿ ಮಾಡಲಿ, ನಮ್ಮ ಅಭ್ಯಂತರವಿಲ್ಲ ಎಂದರು.

ಅನುಮತಿ ಪಡೆದುಕೊಂಡಿರುವುದಕ್ಕಿಂತ ಹೆಚ್ಚು ಜಾಗದಲ್ಲಿ ಗಣಿ ಮಾಡಿದರೆ ಕಡ್ಡಾಯವಾಗಿ ೆನ್ಸಿಂಗ್​ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಬೇಲಿ ತಂತಿ ಹಾಕಿಕೊಳ್ಳಬೇಕು, ಮಾಲೂರು ತಹಸೀಲ್ದಾರ್​, ಗಣಿ ಅಧಿಕಾರಿ ವಿರುದ್ಧ ಸ್ವಯಂ ದೂರು ದಾಖಲಿಸುತ್ತಿದ್ದು, ಪ್ರಕೃತಿ ನಾಶವಾಗುತ್ತಿದೆ ಎಂದರು.

ಬಂದಿರುವ ಆದಾಯಕ್ಕೆ ಒಂದೊಂದು ರೂಪಾಯಿಗೂ ಉತ್ತರ ಕೊಡಬೇಕು, ಅದು ಬಿಟ್ಟು ಬೇರೆ ಬಂದಿದ್ದರೆ ಅದು ಕುಟುಂಬಕ್ಕೆ ಶಾಪವಾಗಿ ತಟ್ಟುತ್ತದೆ. ಮಾಲೀಕರಿಗೆ ಅನುಮತಿ ಇದ್ದರೆ ಚಟುವಟಿಕೆ ಮಾಡಿಕೊಳ್ಳಲಿ, ಇಲಾಖೆಯವರು ಸಿಬ್ಬಂದಿ ಬಂದಿದ್ದಾರೆ, ಯಾವುದೇ ಮಾಹಿತಿ ನೀಡುತ್ತಿಲ್ಲ. ಪರಿಸರ ಅಧಿಕಾರಿಯಿಂದಲೂ ವರದಿ ತರಿಸಿಕೊಳ್ಳಲಾಗುವುದು. ತಪು$್ಪ ಆಗಿದ್ದರೆ ಯಾವುದೇ ಅಧಿಕಾರಿ, ಸಿಬ್ಬಂದಿಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ನಕಲಿ ವೈದ್ಯರ ಪತ್ತೆ ಮಾಡಲಾಗುತ್ತಿದೆ, ಜನರು ಸಹಕಾರ ನೀಡಬೇಕು. ಅಧಿಕಾರಿಗಳು ಧೋರಣೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ, ಅಧಿಕಾರಿಗಳಿಗೆ ಸಾರ್ವಜನಿಕರ ಬಗ್ಗೆ ಕಾಳಜಿಯಿದ್ದರೆ ಇರಬೇಕು, ಇಲ್ಲ ಅಂದರೆ ಜಿಲ್ಲೆಯಿಂದ ಜಾಗ ಖಾಲಿ ಮಾಡಿಕೊಂಡು ಹೋಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net